ADVERTISEMENT

ಜಯಲಲಿತಾ ಪ್ರಕರಣ: ಸುಪ್ರೀಂ ಕೋರ್ಟ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 20:47 IST
Last Updated 1 ಏಪ್ರಿಲ್ 2015, 20:47 IST

ನವದೆಹಲಿ: ಆದಾಯ ಮೀರಿ ಅಕ್ರಮ ಆಸ್ತಿ ಹೊಂದಿರುವ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಗೆ ಹೊಸ ಪಬ್ಲಿಕ್‌ ಪ್ರಾಸಿಕ್ಯೂಟರ್ ಅವರನ್ನು ನೇಮಕ ಮಾಡದ ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿತು.

ಜಯಲಲಿತಾ ಪ್ರಕರಣದಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ಭವಾನಿ ಸಿಂಗ್‌ ಅವರನ್ನು ನೇಮಕ ಮಾಡಿದ ಕ್ರಮವನ್ನು ಪ್ರಶ್ನಿಸಿ ಡಿಎಂಕೆ ನಾಯಕ ಅನ್ಬಳಗನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಮದನ್‌ ಬಿ. ಲೋಕೂರ್‌ ಹಾಗೂ ನ್ಯಾ. ಆರ್‌. ಭಾನುಮತಿ ಅವರನ್ನೊಳಗೊಂಡ ಪೀಠವು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಎರಡು ದಿನದಲ್ಲಿ ಎರಡನೇ ಬಾರಿಗೆ ಕರ್ನಾಟಕವು ಸರ್ವೋಚ್ಚ ನ್ಯಾಯಾಲಯದಿಂದ ತರಾಟೆಗೆ ಒಳಗಾಗುತ್ತಿದೆ.  ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ, ‘ಸಿ’ ವರ್ಗದ ಗಣಿಗಳ ಹರಾಜಿಗೆ ಮುಂದಾಗಿರುವ ಸರ್ಕಾರವು ತನ್ನಲ್ಲಿರುವ ಅದಿರು ಪ್ರಮಾಣವನ್ನು ಖಾತರಿಪಡಿಸಿಕೊಳ್ಳದೆ ಅಸಡ್ಡೆ ತೋರಿದೆ ಎಂದು ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿತ್ತು.

‘ಕರ್ನಾಟಕ ಹೊಣೆಗಾರಿಕೆ ನಿರ್ವಹಿಸದೆ ತಪ್ಪೆಸಗಿದೆ. ಇದರಿಂದಾಗಿ ಜವಾಬ್ದಾರಿ ಮತ್ತೆ ತಮಿಳುನಾಡು ಮೇಲೆ ಬಿದ್ದಿದೆ.
ನೆರೆಯ ರಾಜ್ಯದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಈ ವಿಷಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕಕ್ಕೆ ಹೇಳಬೇಕಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಹಿಂದೆ ಭವಾನಿಸಿಂಗ್‌ ಅವರನ್ನು ಬದಲಾವಣೆ ಮಾಡಲಾಗಿತ್ತು. ಅದನ್ನು ಸುಪ್ರೀಂ ಕೋರ್ಟ್‌ ದುರುದ್ದೇಶದ ಕ್ರಮ ಎಂದು ಹೇಳಿದ್ದರಿಂದ ಮೇಲ್ಮನವಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಟಸ್ಥರಾಗಬೇಕಾಯಿತು’ ಎಂದು ಕರ್ನಾಟಕದ ಪರ ವಾದಿಸಿದ ಹಿರಿಯ ವಕೀಲ ಎಂ.ಎನ್‌. ರಾವ್‌ ಹೇಳಿದರು.

ಅದಕ್ಕೆ ‘ನಿಮ್ಮ ತೀರ್ಮಾನಗಳನ್ನು ನಾವು ರದ್ದು ಮಾಡಬಾರದೆಂದು ಹೇಳಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಪ್ರತಿಕ್ರಿಯಿಸಿತು.

‘ವಿಶೇಷ ಪ್ರಾಸಿಕ್ಯೂಟರ್‌ ಆರೋಪಿ ಜತೆ ಷಾಮೀಲಾಗಿದ್ದಾರೆ. ಅವರನ್ನು ಮುಂದುವರಿಸಿದರೆ ಈ ಪ್ರಕರಣದಲ್ಲಿ ನ್ಯಾಯ ದೊರೆಯುವುದು ಅನುಮಾನ. ಅಲ್ಲದೆ, ಜಯಲಲಿತಾ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿರೋಧಿಸಿಲ್ಲ’ ಎಂದು ಅನ್ಬಳಗನ್‌ ಆರೋಪಿಸಿದರು.

ಬೆಂಗಳೂರು ನ್ಯಾಯಾಲಯ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಜಯಲಲಿತಾ ಮತ್ತು ಇತರ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಿದ ಎರಡು ದಿನದ ಬಳಿಕ ತಮಿಳುನಾಡು ಸರ್ಕಾರ ಪ್ರಕರಣದಲ್ಲಿ ವಾದಿಸಲು ಅವರನ್ನೇ ಉಳಿಸಿಕೊಂಡಿದೆ. ಇದರಿಂದಾಗಿ ಅವರ ನೇಮಕ ಅಕ್ರಮ ಎಂದು ಅನ್ಬಳಗನ್‌ ವಾದಿಸಿದರು.

2013ರ ಫೆ.2 ರಂದು ಹೊರಡಿಸಿದ ಅಧಿಸೂಚನೆ ತಮ್ಮ ಪರವಾಗಿರುವುದರಿಂದ ಇದರಲ್ಲಿ ಮಧ್ಯ ಪ್ರವೇಶಿಸಲು ಅಪೇಕ್ಷಿಸುವುದಿಲ್ಲ ಎಂದು ಜಯಲಲಿತಾ ಪರ ವಕೀಲ ಎಫ್‌.ಎಸ್. ನಾರಿಮನ್‌ ಹೇಳಿದರು. ಮೇಲ್ಮನವಿ ನ್ಯಾಯಾಲಯದಲ್ಲಿ ವಿಶೇಷ ಪ್ರಾಸಿಕ್ಯೂಟರ್‌ ಅವರನ್ನು ಬದಲಾವಣೆ ಮಾಡುವುದಾಗಿ ರಾಜ್ಯದ ಅಡ್ವೊಕೇಟ್‌ ಜನರಲ್‌ ಹೇಳಿದ ಬಳಿಕವೂ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ವಿವರಿಸುವುದು ಕರ್ನಾಟಕಕ್ಕೆ ಬಿಟ್ಟ ವಿಚಾರ ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಏಪ್ರಿಲ್‌ 10ರಿಂದ ಪುನರಾರಂಭವಾಗಲಿದೆ. ಈಗಾಗಲೇ ಹೈಕೋರ್ಟ್‌ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದು, ಏಪ್ರಿಲ್‌ 30ರೊಳಗೆ ತೀರ್ಪು ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.