ADVERTISEMENT

ಜಾರ್ಖಂಡ್‌: ಹಸಿವಿನಿಂದ ರಿಕ್ಷಾ ಗಾಡಿ ಚಾಲಕ ಸಾವು

ಪಿಟಿಐ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST

ಧನಬಾದ್ (ಜಾರ್ಖಂಡ್‌): ‘ರಿಕ್ಷಾ ಗಾಡಿ ಎಳೆಯುವ ನನ್ನ ಪತಿ ಹಸಿವಿನಿಂದ ಮೃತಪಟ್ಟಿದ್ದಾರೆ’ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಜಿಲ್ಲಾಡಳಿತ ತಳ್ಳಿ ಹಾಕಿದ್ದು, ಝಾರಿಯಾ ನಗರದ ತಾರಾಬಗಾನ್‌ ಗ್ರಾಮದಲ್ಲಿ ರಿಕ್ಷಾ ಗಾಡಿ ಎಳೆಯುವ ವ್ಯಕ್ತಿ ಅನಾರೋಗ್ಯದಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಿದೆ.

ಕೆಲ ದಿನಗಳ ಹಿಂದೆ ಹಸಿವಿನಿಂದ ಬಾಲಕಿ ಯೊಬ್ಬಳು ಮೃತಪಟ್ಟ ಘಟನೆ ಜಾರ್ಖಂಡ್‌ನಲ್ಲಿ ವರದಿಯಾಗಿತ್ತು.

ರಿಕ್ಷಾ ಗಾಡಿ ಎಳೆಯುವ ಬೈಜನಾಥ್‌ ರವಿದಾಸ್‌ (45) ಅವರು ಶುಕ್ರವಾರ ಮೃತಪಟ್ಟಿದ್ದು, ಶನಿವಾರ ಅಂತ್ಯಕ್ರಿಯೆ ಮಾಡಲಾಗಿದೆ. ಸಾವಿಗೆ ಹಸಿವು ಕಾರಣ ಎಂದು ಪತ್ನಿ ಪಾರ್ವತಿ ದೇವಿ ಪ‍ತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

‘ನನ್ನ ಪತಿ ಎರಡು ದಿನಗಳಿಂದ ಆಹಾರ ಸೇವಿಸಿಲ್ಲ. ‌ಅನಾರೋಗ್ಯ ಇದ್ದರೂ ನಮಗೆ  ಔಷಧಿ ತೆಗೆದುಕೊಳ್ಳಲು ಹಣ ಇರಲಿಲ್ಲ. ಎರಡು ದಿನಗಳಿಂದ ಕುಟುಂಬದ ಯಾರೂ ಸಹ ಊಟ ಮಾಡಿಲ್ಲ’ ಎಂದಿದ್ದಾರೆ. ಬೈಜನಾಥ್‌ ಅವರಿಗೆ ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಹಸಿವಿನಿಂದ ಬೈಜನಾಥ್‌ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಜಾಲ ತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಗ್ರಾಮಕ್ಕೆ ಧಾವಿಸಿದ ಧನಬಾದ್‌ ಜಿಲ್ಲಾಧಿಕಾರಿ ಎ.ದೊಡ್ಡೆ ಅವರು ಕುಟುಂಬ ನಿರ್ವಹಣೆಗೆ ₹20 ಸಾವಿರ ಹಾಗೂ 50 ಕೆ.ಜಿ ಆಹಾರ ಧಾನ್ಯಗಳನ್ನು ನೀಡಿದ್ದಾರೆ.

ಘಟನೆ ಕುರಿತು ಮಾತನಾಡಿರುವ ದೊಡ್ಡೆ, ಬೈಜನಾಥ್‌ ಅವರು
ಒಂದು ತಿಂಗಳಿನಿಂದ ಹಾಸಿಗೆ ಹಿಡಿದಿದ್ದು, ನಂತರ ಸಾವನ್ನಪ್ಪಿದ್ದಾರೆ. ಪ್ರಕರಣದ ತನಿಖೆಗೆ ಸೂಚನೆ ನೀಡಲಾಗಿದೆ ಎಂದರಲ್ಲದೇ. ಸಾವಿಗೆ ಅನಾರೋಗ್ಯ ಕಾರಣ. ಹಸಿವು ಅಲ್ಲ ಎಂದಿದ್ದಾರೆ.

‘ನಾವು ಆಧಾರ್‌ ಕಾರ್ಡ್‌ ಹೊಂದಿದ್ದು, ಅಕ್ಟೋಬರ್‌ ಎರಡನೇ ವಾರದಲ್ಲಿ ಪಡಿತರ ಚೀಟಿಗಾಗಿ
ಅರ್ಜಿ ಸಲ್ಲಿಸಿದ್ದೇವೆ’ ಎಂದು ಕುಟುಂಬದವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.