ADVERTISEMENT

ಜಾವಡೇಕರ್‌ಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ಮೇ 2014, 19:38 IST
Last Updated 28 ಮೇ 2014, 19:38 IST

ನವದೆಹಲಿ: ಕರ್ನಾಟಕದಿಂದ ರಾಜ್ಯಸಭೆಗೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಅವರನ್ನು ಕಳುಹಿ­ಸುವ ಬಗ್ಗೆ ಬಿಜೆಪಿ ಹೈಕಮಾಂಡ್‌ ಪರಿಶೀಲಿಸುತ್ತಿದೆ. ಆದರೆ, ಹೊರಗಿನವ­ರನ್ನು ಹೇರದೆ ಸ್ಥಳೀಯರಿಗೆ ಆದ್ಯತೆ ನೀಡುವಂತೆ ರಾಜ್ಯ ಮುಖಂಡರು ಒತ್ತಾಯ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಂತ್ರಿಮಂಡಳ ಸೇರಿದ ಆಂಧ್ರದ ನಿರ್ಮಲಾ ಸೀತಾರಾಮನ್‌ ಹಾಗೂ ಮಹಾರಾಷ್ಟ್ರದ ಪ್ರಕಾಶ್‌ ಜಾವಡೇಕರ್‌ ಸಂಸತ್ತಿನ ಉಭಯ ಸದನಗಳ ಸದಸ್ಯ­ರಲ್ಲ. ಸಚಿವರಾಗಿ ನೇಮಕಗೊಂಡ ಆರು ತಿಂಗಳೊಳಗಾಗಿ ಯಾವುದಾದರೂ ಸದನದ ಸದಸ್ಯರಾಗುವುದು ಕಡ್ಡಾಯ. ನಿರ್ಮಲಾ ಆಂಧ್ರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ­ಯಾಗು­ವುದು ಬಹುತೇಕ ಖಚಿತ. ಕರ್ನಾಟಕದಿಂದ ಜಾವಡೇಕರ್‌ ಹೆಸರು ಪರಿಶೀಲನೆ­ಯಲ್ಲಿದೆ.

ಮೋದಿ ಈಗಾಗಲೇ ನಿರ್ಮಲಾ ಸೀತಾರಾಮನ್‌ ಅವರನ್ನು ಆಂಧ್ರದಿಂದ ರಾಜ್ಯಸಭೆಗೆ ಆರಿಸಿ ಕಳುಹಿಸುವ ಸಂಬಂಧ ತೆಲಗು ದೇಶಂ ಮುಖಂಡ ಎನ್‌. ಚಂದ್ರಬಾಬು ನಾಯ್ಡು ಅವರ ಜತೆ ಮಾತುಕತೆ ಮಾಡಿದ್ದಾರೆ.ಅವರೂ ಒಪ್ಪಿದ್ದಾರೆ. ಮಾಜಿ ಮುಖ್ಯಮಂತ್ರಿ ಎನ್‌.ಜನಾರ್ಧನರೆಡ್ಡಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಿರ್ಮಲಾ ಸ್ಪರ್ಧಿಸಲಿದ್ದಾರೆ.

ಕೆಎಲ್‌ಇ ಸಂಸ್ಥೆ ಅಧ್ಯಕ್ಷ ಬೆಳಗಾವಿಯ ಪ್ರಭಾಕರ ಕೋರೆ ಅವರ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಜಾವಡೇಕರ್‌ ಹೆಸರು ಪರಿಶೀಲನೆಯಲ್ಲಿದೆ. ಹೊರಗಿನ­ವರನ್ನು ರಾಜ್ಯದ ಮೇಲೆ ಹೇರಬಹು­ದೆಂಬ ಸುಳಿವು ಸಿಕ್ಕ ತಕ್ಷಣ ರಾಜ್ಯ ಬಿಜೆಪಿ ಮುಖಂಡರು ವರಿಷ್ಠರನ್ನು ಕಂಡು ಸ್ಥಳೀಯರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದಿಂದ ಈಗಾಗಲೇ ಆಂಧ್ರದ­ವರಾದ ವೆಂಕಯ್ಯ ನಾಯ್ಡು ಮತ್ತು ತಮಿಳುನಾಡು ಮೂಲದ ರಾಮಕೃಷ್ಣ ಅವರನ್ನು ರಾಜ್ಯಸಭೆಗೆ ಕಳುಹಿಸಲಾಗಿದೆ. ಮತ್ತೆ ಹೊರಗಿನವರನ್ನು ಹೇರುವುದು ಸರಿಯಲ್ಲ. ಅದು ತಪ್ಪು ತಿಳುವಳಿಕೆಗೆ ಅವಕಾಶವಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಭಾಕರ ಕೋರೆ ಅವರಿಗೆ ಮತ್ತೆ ಅವಕಾಶ ನೀಡಬೇಕೆಂದು ಕೆಲವು ಬಿಜೆಪಿ ಮುಖಂಡರು ಸಲಹೆ ಮಾಡಿದ್ದಾರೆ. ಇನ್ನೂ ಕೆಲವರು ಹಿರಿಯ­ರಾದ ರಾಮಾ ಜೋಯಿಸ್‌ ಅವರನ್ನೇ ಮುಂದುವರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿಗಿರುವ ಸಂಖ್ಯಾ ಬಲ ಒಬ್ಬರನ್ನು ಆಯ್ಕೆ ಮಾಡಲು ಸಾಕಾಗಲಿದೆ. ವಿಧಾನಪರಿಷತ್‌ ಹಾಗೂ ರಾಜ್ಯಸಭೆ ಚುನಾವಣೆ ಕುರಿತು ಚರ್ಚಿಸಲು ರಾಜ್ಯ ಬಿಜೆಪಿ ಪ್ರಮುಖರ ಸಮಿತಿ ಶುಕ್ರವಾರ ಸೇರುತ್ತಿದೆ. ಅದೇ ದಿನ ಶಾಸಕಾಂಗ ಪಕ್ಷ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಅನಂತರ ಹೈಕಮಾಂಡ್‌ಗೆ ಹೆಸರುಗಳನ್ನು ಶಿಫಾರಸು ಮಾಡ­ಲಿದ್ದೇವೆ ಎಂದು ರಾಜ್ಯ ಬಿಜೆಪಿ ಮೂಲಗಳು ಖಚಿತಪಡಿಸಿವೆ.

ಕಾಂಗ್ರೆಸ್‌ ಮುಖಂಡ ಎಸ್‌.ಎಂ. ಕೃಷ್ಣ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌, ಬಿಜೆಪಿಯ ರಾಮಾ ಜೋಯಿಸ್‌ ಮತ್ತು ಪ್ರಭಾಕರ ಕೋರೆ ಅವರ ಅವಧಿ ಜೂನ್‌ 24ರಂದು ಮುಗಿಯಲಿದೆ. ಈ ನಾಲ್ಕು ಸ್ಥಾನ­ಗಳಿಗೂ ವಿಧಾನಸಭೆಯಿಂದ ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆಗೆ ಜೂನ್‌ 9ರಂದು ಕೊನೆಯ ದಿನ. ಜೂನ್‌ 19ರಂದು ಮತದಾನ ನಡೆಯಲಿದೆ.

ಕಾಂಗ್ರೆಸ್‌ಗೆ ಇಬ್ಬರು ಸದಸ್ಯರನ್ನು ಚುನಾಯಿಸಿದ ಬಳಿಕವೂ ಹೆಚ್ಚುವರಿ ಮತಗಳು ಉಳಿಯಲಿವೆ. ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ರಾಜ್ಯಸಭೆಗೆ ಕಳುಹಿಸಲು ಎಐಸಿಸಿ ಆಲೋಚಿಸುತ್ತಿದ್ದು, ಮುಖ್ಯ­ಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣ ಮತ್ತು ಬಿ.ಕೆ.ಹರಿಪ್ರಸಾದ್‌ ಅವರೇ ಮುಂದುವರಿಯುವ ಸಾಧ್ಯತೆ­ಗಳು ದಟ್ಟವಾಗಿವೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ. ವಿಧಾನ ಪರಿಷತ್‌ ಮತ್ತು ರಾಜ್ಯಸಭೆ ಚುನಾವಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಶೀಘ್ರವೇ ದೆಹಲಿಗೆ ಬರಲಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT