ADVERTISEMENT

ಜಿಎಸ್‌ಟಿ ಹಾದಿ ಸುಗಮ

ಸಿಜಿಎಸ್‌ಟಿ, ಐಜಿಎಸ್‌ಟಿ ಕರಡು ಮಸೂದೆಗೆ ಮಂಡಳಿ ಒಪ್ಪಿಗೆ

ಪಿಟಿಐ
Published 4 ಮಾರ್ಚ್ 2017, 20:25 IST
Last Updated 4 ಮಾರ್ಚ್ 2017, 20:25 IST
ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಅಧಿಯಾ  ಸಚಿವರಾದ ಅರುಣ್‌ ಜೇಟ್ಲಿ ಮತ್ತು ಸಂತೋಷ್‌ ಗಂಗ್ವಾರ್‌ ಭಾಗವಹಿಸಿದ್ದರು
ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಅಧಿಯಾ ಸಚಿವರಾದ ಅರುಣ್‌ ಜೇಟ್ಲಿ ಮತ್ತು ಸಂತೋಷ್‌ ಗಂಗ್ವಾರ್‌ ಭಾಗವಹಿಸಿದ್ದರು   

ನವದೆಹಲಿ: ‘ಸರಕು ಮತ್ತು ಸೇವಾ ತೆರಿಗೆ’ಯನ್ನು (ಜಿಎಸ್‌ಟಿ) ಜುಲೈ 1 ರಿಂದ ಜಾರಿಗೆ ತರುವ ಹಾದಿ ಸುಗಮವಾಗುತ್ತಿದೆ. ಮಾರ್ಚ್‌ 9ರಿಂದ ನಡೆಯುವ ಬಜೆಟ್‌ ಅಧಿವೇಶನದಲ್ಲಿ ಮಸೂದೆಗೆ ಶಾಸನಾತ್ಮಕ ಒಪ್ಪಿಗೆ ಪಡೆಯುವ ವಿಶ್ವಾಸವಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

ಶನಿವಾರ ಇಲ್ಲಿ ಜಿಎಸ್‌ಟಿ ಮಂಡಳಿಯ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕೇಂದ್ರದ ಜಿಎಸ್‌ಟಿ ಮತ್ತು ಅಂತರ ರಾಜ್ಯ ವಹಿವಾಟಿಗೆ ಸಂಬಂಧಿಸಿದ ಸಮಗ್ರ ಜಿಎಸ್‌ಟಿ (ಐ–ಜಿಎಸ್‌ಟಿ) ಕರಡು ಮಸೂದೆಗೆ ಜಿಎಸ್‌ಟಿ ಮಂಡಳಿ ಒಪ್ಪಿಗೆ ದೊರೆತಿದೆ. ಆದರೆ, ರಾಜ್ಯಗಳಿಗೆ ಸಂಬಂಧಿಸಿದ ಎಸ್‌–ಜಿಎಸ್‌ಟಿ ಮತ್ತು ಕೆಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಯುಟಿ–ಜಿಎಸ್‌ಟಿ ಮಸೂದೆಗಳಿಗೆ ಮಾರ್ಚ್‌ 16 ರಂದು ನಡೆಯಲಿರುವ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು’ ಎಂದರು.

‘ಗರಿಷ್ಠ ಶೇ 40ರ ವರೆಗೂ ತೆರಿಗೆ ವಿಧಿಸಲು (ಶೆ 20 ರಷ್ಟು ಕೇಂದ್ರ ಮತ್ತು ಶೇ 20 ರಷ್ಟು ರಾಜ್ಯಗಳು) ಜಿಎಸ್‌ಟಿ ಮಸೂದೆಯಲ್ಲಿ ಅವಕಾಶವಿದೆ. ಆದರೆ, ತೆರಿಗೆ ದರವನ್ನು ಈ ಹಿಂದೆ ಮಂಡಳಿಯು ಒಪ್ಪಿಗೆ ನೀಡಿರುವ ಹಂತಗಳಲ್ಲಿಯೇ (ಶೇ 5, ಶೇ 12, ಶೇ 18 ಮತ್ತು ಶೇ 28) ಇಡಲಾಗುವುದು’ ಎಂದು ಜೇಟ್ಲಿ ತಿಳಿಸಿದರು.

ರೈತರಿಗೆ ನೋಂದಣಿ ಅಗತ್ಯ ಇಲ್ಲ
ಕೃಷಿಕರು ಮತ್ತು ವಾರ್ಷಿಕ ₹ 20 ಲಕ್ಷದವರೆಗೆ ವಹಿವಾಟು ನಡೆಸುವ ಸಣ್ಣ ವರ್ತಕರು ಜಿಎಸ್‌ಟಿಯಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಶೇ 5 ತೆರಿಗೆ: 1 ವರ್ಷದಲ್ಲಿ ₹50 ಲಕ್ಷದ ವರೆಗೆ ವಹಿವಾಟು ನಡೆಸುವ ಸಣ್ಣ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಶೇ 5 ರಷ್ಟು ತೆರಿಗೆ (ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಸಮಾನವಾಗಿ ಹಂಚಿಕೆ) ವಿಧಿಸಲು ಮಂಡಳಿ ನಿರ್ಧರಿಸಿದೆ.

‘ಸಣ್ಣ  ಉದ್ಯಮಗಳನ್ನು ನಿಗದಿತ (ಕಾಂಪೋಸಿಟ್‌) ತೆರಿಗೆ  ವ್ಯಾಪ್ತಿಗೆ ತರುವಂತೆ ರಾಜ್ಯಗಳು ಬೇಡಿಕೆ ಸಲ್ಲಿಸಿದ್ದವು. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಅಧಿಯಾ ತಿಳಿಸಿದರು.
*
ಈ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ ಶಾಸನಾತ್ಮಕ ಒಪ್ಪಿಗೆ ಸಿಗುವ ವಿಶ್ವಾಸವಿದೆ. ಜುಲೈ 1 ರಿಂದ  ಜಿಎಸ್‌ಟಿ ಜಾರಿಯಾಗುವ ಆಶಾವಾದವಿದೆ.
ಅರುಣ್‌ ಜೇಟ್ಲಿ
ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT