ADVERTISEMENT

ಜಿಎಸ್‌ಎಲ್‌ವಿ–ಮಾರ್ಕ್‌–3: ಪ್ರಾಯೋಗಿಕ ಉಡಾವಣೆಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2014, 19:30 IST
Last Updated 17 ಡಿಸೆಂಬರ್ 2014, 19:30 IST

ಚೆನ್ನೈ (ಐಎಎನ್‌ಎಸ್‌/ಪಿಟಿಐ): ಭಾರಿ ತೂಕದ ಉಪಗ್ರಹಗಳು ಹಾಗೂ ಮಾನವಸಹಿತ ಅಂತರಿಕ್ಷ ನೌಕೆಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ಇಸ್ರೊದ ಅತ್ಯಾಧುನಿಕ ‘ಜಿಎಸ್‌ಎಲ್‌ವಿ ಮಾರ್ಕ್‌–3’ ರಾಕೆಟ್‌ನ ಪ್ರಾಯೋಗಿಕ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.

ಗುರುವಾರ ಬೆಳಿಗ್ಗೆ 9.30ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ‘ಜಿಎಸ್‌ಎಲ್‌ವಿ ಮಾರ್ಕ್‌–3’ (ಭೂಸ್ಥಿರ ಉಪಗ್ರಹ ಉಡಾವಣಾ ವಾಹನ)ಯನ್ನು ಉಡಾವಣೆ ಮಾಡಲಾಗುತ್ತದೆ ಎಂದು ಈ ಕೇಂದ್ರದ ನಿರ್ದೇಶಕ ವೈ. ಎಸ್‌. ಪ್ರಸಾದ್‌ ತಿಳಿಸಿದ್ದಾರೆ.

630 ಟನ್‌ ತೂಕದ ಈ ರಾಕೆಟ್‌ಗೆ ದ್ರವ ಹಾಗೂ ಘನ ಇಂಧನದ ಮೂಲಕ ಬಲ ತುಂಬಲಾಗುತ್ತದೆ. ಆದರೆ, ಕ್ರಯೋಜೆನಿಕ್‌ ಹಂತದ ಎಂಜಿನ್‌ ನಿಷ್ಕ್ರಿಯ ಸ್ಥಿತಿಯಲ್ಲಿ ಇರುತ್ತದೆ. 4 ಸಾವಿರ ಕೆ.ಜಿ. ತೂಕದ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ದೇಶೀಯ ಕ್ರಯೋ­ಜೆನಿಕ್‌ ಎಂಜಿನ್‌ ಅನ್ನು ಇಸ್ರೊ ಸಿದ್ಧಪಡಿಸುತ್ತಿದ್ದು, ಎರಡು ವರ್ಷ­ದೊಳಗೆ ಅದು ಸಿದ್ಧವಾಗುವ ನಿರೀಕ್ಷೆಯಿದೆ. ‘ಜಿಎಸ್‌ಎಲ್‌ವಿ ಮಾರ್ಕ್‌–3’ಯ ಇತರ ಎಂಜಿನ್‌ಗಳು ಸಿದ್ಧವಾದ ಕಾರಣ ಇಸ್ರೊ ಪ್ರಾಯೋಗಿಕ ಪರೀಕ್ಷೆಗೆ ಮುಂದಾಗಿದೆ.

ಈ ಪ್ರಾಯೋಗಿಕ ಉಡಾವಣೆಗೆ 155 ಕೋಟಿ ರೂಪಾಯಿ ವೆಚ್ಚ­ವಾಗುತ್ತಿದೆ. ರಾಕೆಟ್‌ 126 ಕಿ.ಮೀ. ಎತ್ತರಕ್ಕೆ ಚಿಮ್ಮಲಿದ್ದು, ಮನುಷ್ಯರನ್ನು ಕೊಂಡೊ­ಯ್ಯುವ ಅಂತರಿಕ್ಷ ನೌಕೆಯ ಮಾದರಿ 20 ನಿಮಿಷಗಳ ನಂತರ ಬಂಗಾಳ ಕೊಲ್ಲಿಯಲ್ಲಿ ಬೀಳಲಿದೆ.  ದೈತ್ಯ ಕಪ್‌ ಕೇಕ್‌ನಂತೆ ಕಾಣುವ  ಈ ಅಂತರಿಕ್ಷ ನೌಕೆಯ ಮಾದರಿ 3650 ಕೆ.ಜಿ ತೂಕದ್ದಾಗಿದೆ. 23 ಜನರು ಅದರಲ್ಲಿ ಕುಳಿತುಕೊಳ್ಳ­ಬಹುದಾಗಿದೆ.

ಶ್ರೀಹರಿಕೋಟಾ ಕೇಂದ್ರದಿಂದ 1,600 ಕಿ.ಮೀ. ದೂರ ಸಮುದ್ರದಲ್ಲಿ ಬೀಳುವ ಅಂತರಿಕ್ಷ ನೌಕೆಯನ್ನು ಭಾರತೀಯ ನೌಕಾಪಡೆ ಇಸ್ರೊಗೆ ಮುಟ್ಟಿಸಲಿದೆ. ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಯೋಜನೆಗೆ, ಚಂದ್ರ, ಮಂಗಳ ಇತ್ಯಾದಿ ಗ್ರಹಗಳ ಅಂಗಳದಲ್ಲಿ ಅಂತರಿಕ್ಷ ನೌಕೆಯನ್ನು ಇಳಿಸುವ ಯೋಜನೆಗೆ ಇದು ಮೊದಲ ಮೆಟ್ಟಿಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.