ADVERTISEMENT

ಜೂನ್‌ 4ರಿಂದ ಮೊದಲ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 29 ಮೇ 2014, 19:30 IST
Last Updated 29 ಮೇ 2014, 19:30 IST

ನವದೆಹಲಿ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಹದಿನಾರನೆ ಲೋಕಸಭೆಯ ಮೊದಲ ಅಲ್ಪಾವಧಿ ಅಧಿವೇಶನ ಜೂನ್‌ 4ರಿಂದ 11ರವರೆಗೆ ನಡೆಯಲಿದೆ.
ಜೂನ್‌ 4 ಮತ್ತು 5 ರಂದು ಲೋಕಸಭೆ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸ­ಲಿದ್ದಾರೆ. ಮರುದಿನ  ಸ್ಪೀಕರ್‌ ಆಯ್ಕೆ ನಡೆಯಲಿದೆ. ಜೂನ್‌ 9 ರಂದು ರಾಜ್ಯಸಭೆ ಅಧಿವೇಶನ ಸೇರ­ಲಿದ್ದು, ಅಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುವರು.

ಹಂಗಾಮಿ ಸ್ಪೀಕರ್‌: ಹಿರಿಯ ಕಾಂಗ್ರೆಸ್‌ ಸದಸ್ಯ ಕಮಲ್‌ನಾಥ್‌ ಹಂಗಾಮಿ ಸ್ಪೀಕರ್‌ ಆಗಿ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವರು. ಬಿಜೆಡಿಯ ಅರ್ಜುನ್‌ ಚರಣ್‌ ಸೇಠಿ, ಎನ್‌ಪಿಪಿಯ ಪಿ. ಎ ಸಂಗ್ಮಾ ಹಾಗೂ ಬೀರೆನ್‌ಸಿಂಗ್‌ ಎಂಗ್ಟಿ ಅವರನ್ನೊಳಗೊಂಡ ತಂಡ ಹಂಗಾಮಿ ಸ್ಪೀಕರ್‌ಗೆ ಸಹಕಾರ ನೀಡಲಿದೆ ಎಂದು ಸಚಿವ ಸಂಪುಟದ ಸಭೆಯ ಬಳಿಕ ಸಂಸದೀಯ ವ್ಯವಹಾರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದರು.

ವಿರೋಧ ಪಕ್ಷದ ಸ್ಥಾನಮಾನ: ಅಗತ್ಯ ಬಲ ಹೊಂದಿರದ ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನಮಾನ ನೀಡಲಾ­ಗುವುದೇ ಎಂಬ ಪ್ರಶ್ನೆಗೆ, ನಾವು ಬೇರೆ ಬೇರೆ ಸಂಪ್ರದಾಯ– ನಡಾವಳಿ­ಯನ್ನು ಅಧ್ಯಯನ ಮಾಡುತ್ತಿದ್ದೇವೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಇನ್ನೂ ಸಾಕಷ್ಟು ಸಮಯ­ವಿದೆ ಎಂದು ನಾಯ್ಡು ಉತ್ತರಿಸಿದರು.

453 ಸದಸ್ಯರಿರುವ ಲೋಕಸಭೆ­ಯಲ್ಲಿ ಕಾಂಗ್ರೆಸ್‌ ಒಳಗೊಂಡಂತೆ ಯಾವುದೇ ಪಕ್ಷಗಳಿಗೂ ಶೇ 10ರಷ್ಟು ಸದಸ್ಯರಿಲ್ಲ. ಕಾಂಗ್ರೆಸ್‌ ಪಕ್ಷ 44 ಸದಸ್ಯರನ್ನು ಹೊಂದಿದ್ದು ಇನ್ನೂ ಹತ್ತು ಸದಸ್ಯರು ಕಡಿಮೆ ಇದ್ದಾರೆ.

ಸ್ಪೀಕರ್‌ ಯಾರೆಂಬ ಬಗ್ಗೆಯೂ ನಿರ್ಧಾರ ಮಾಡಿಲ್ಲ. ಸಂಸತ್ತಿನ ಕಾರ್ಯ­ಕಲಾಪಗಳನ್ನು ನೋಡಿಕೊಂಡು ಅಗತ್ಯವಾದರೆ ಅಧಿವೇಶನವನ್ನು ದಿನದ ಮಟ್ಟಿಗೆ ವಿಸ್ತರಣೆ ಮಾಡಲಾಗುವುದು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಲೋಕಸಭೆ ಮತ್ತು ರಾಜ್ಯಸಭೆ ಜೂನ್‌ 10, 11ರಂದು ಎತ್ತಿಕೊಳ್ಳಲಿವೆ. ಕೊನೆ­ಯಲ್ಲಿ ಪ್ರಧಾನಿ ಚರ್ಚೆಗೆ ಉತ್ತರ ನೀಡಲಿದ್ದಾರೆ ಎಂದು ಸಂಸದೀಯ ಸಚಿವರು ನುಡಿದರು.

ಉಪ ಸ್ಪೀಕರ್‌ ಸ್ಥಾನ: ಎಐಎಡಿಎಂಕೆ, ಟಿಎಂಸಿ ಮತ್ತು ಬಿಜೆಡಿ ಸಮ್ಮಿಶ್ರ ಮೈತ್ರಿಕೂಟಕ್ಕೆ ಲೋಕಸಭೆ ಉಪ ಸ್ಪೀಕರ್‌ ಸ್ಥಾನ ದೊರೆಯುವ ಸಂಭವವಿದೆಯೇ ಎಂಬ ಪ್ರಶ್ನೆಗೆ, ಸಚಿವರು ಹಾರಿಕೆ ಉತ್ತರ ಕೊಟ್ಟರು. ‘ಇದುವರೆಗೆ ಸಮ್ಮಿಶ್ರ ಸರ್ಕಾರ ನೋಡಿದ್ದೇವೆ ವಿನಾ ಸಮ್ಮಿಶ್ರ ವಿರೋಧ ಪಕ್ಷಗಳನ್ನು ಕಂಡಿಲ್ಲ.

ಸಂಪ್ರದಾಯವೇನಿದೆ ನೋಡಬೇಕಾಗಿದೆ’ ಎಂದರು. ಅಧಿವೇಶನ ಹೊಸ ಸದಸ್ಯರ ಪ್ರಮಾಣ ವಚನ ಹಾಗೂ ಸ್ಪೀಕರ್‌ ಆಯ್ಕೆಗೆ ಮಾತ್ರ ಸೀಮಿತ. ಬೇರೆ ಯಾವುದೇ ವಿಷಯಗಳನ್ನು ಎತ್ತಿಕೊಳ್ಳುವುದಿಲ್ಲ ಎಂದು ಸಂಸದೀಯ ವ್ಯವಹಾರ ಸಚಿವರು ಸ್‍ಪಷ್ಟಪಡಿಸಿದರು. ಸಂಸತ್ತಿನ ಮುಂದೆ ಯಾವ್ಯಾವ ಮಸೂದೆಗಳಿವೆ. ಅವುಗಳ ಭವಿಷ್ಯ ಏನಾಗಿದೆ ಎಂದು ನೋಡಬೇಕಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ನಗರಾಭಿವೃದ್ಧಿ ಸಚಿವರೂ ಆಗಿರುವ ವೆಂಕಯ್ಯ ನಾಯ್ಡು, ಮಾಜಿ ಸಚಿವರು ಮತ್ತು ಸಂಸದರಿಗೆ ಆದಷ್ಟು ತ್ವರಿತವಾಗಿ ಬಂಗಲೆಗಳನ್ನು ಖಾಲಿ ಮಾಡು­ವಂತೆ ಮನವಿ ಮಾಡಿದರು. ಹಳಬರು ಬಂಗಲೆಗಳನ್ನು ಬಿಡದಿದ್ದರೆ ಹೊಸಬರಿಗೆ ಮಂಜೂ­ರು ಮಾಡುವುದು ಕಷ್ಟವಾಗ­ಲಿದೆ ಎಂದೂ ಅಭಿಪ್ರಾಯಪಟ್ಟರು.

ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕೆ  ಆಗ್ರಹಿಸುತ್ತಿರುವ  ಶಿವಸೇನೆ ಮತ್ತು ಟಿಡಿಪಿಗೆ ಅವಕಾಶ ಮಾಡಿಕೊಡಲು ಪ್ರಧಾನಿ ಮೋದಿ ಅವರು ಜೂನ್‌ ಅಂತ್ಯದೊಳಗೆ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಸಂಬಂಧ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಗುರುವಾರ ಪ್ರಧಾನಿ ಮತ್ತು ಇತರ ನಾಯಕರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.