ADVERTISEMENT

ಜೂನ್‌ 9ಕ್ಕೆ ಜಯಾ ಹಾಜರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2014, 19:30 IST
Last Updated 3 ಜೂನ್ 2014, 19:30 IST

ಚೆನ್ನೈ (ಪಿಟಿಐ): ಆದಾಯ ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೂನ್‌ 9ರಂದು  ವಿಚಾರಣೆಗೆ ಖುದ್ದು ಹಾಜರಾಗುವಂತೆ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಹಾಗೂ ಅವರ ಆಪ್ತರಾದ ಶಶಿಕಲಾ ಅವರಿಗೆ   ಸ್ಥಳೀಯ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ವಿಚಾರಣೆ ಪೂರ್ಣಗೊಳಿಸಿ  ದೋಷಾ ರೋಪ ನಿಗದಿ ಮಾಡಲು ಅನುಕೂಲ ವಾಗುವಂತೆ ವಾರದ ಒಳಗಾಗಿ  ಪ್ರಕರಣದ ವಿಚಾರಣೆ ಕೈಗೆತ್ತಿ­ಕೊಳ್ಳ­­­ಬೇಕು ಎಂದು ಪ್ರಾಸಿಕ್ಯೂಷನ್‌ ಸಲ್ಲಿಸಿದ ಮನವಿಯನ್ನು  ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಲಯ ಪುರಸ್ಕರಿಸಿತು.

ಈ ಮಧ್ಯೆ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡುವಂತೆ ಕೋರಿ ಇಬ್ಬರೂ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು. ಆ ನಂತರವೂ ಅನೇಕ ಬಾರಿ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದರು.

ಜೂನ್‌ 9ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ  ನ್ಯಾಯಾಧೀಶ ಆರ್‌. ದಕ್ಷಿಣಾಮೂರ್ತಿ ಅವರು ಜಯಲಲಿತಾ ಮತ್ತು ಶಶಿಕಲಾ ಅವರಿಗೆ ಸೂಚಿಸಿದರು.  
ಆದಾಯ ತೆರಿಗೆ ಮಾಹಿತಿ ಸಲ್ಲಿಸದ ಇವರಿಬ್ಬರ ವಿರುದ್ಧ ಆದಾಯ ತೆರಿಗೆ ಇಲಾಖೆ ಈಗಾಗಲೇ ಪ್ರಕರಣ ದಾಖಲಿಸಿ­ಕೊಂಡು ವಿಚಾರಣೆ ಆರಂಭಿಸಿತ್ತು.

ತಮ್ಮ ವಿರುದ್ಧ ದಾಖಲಾಗಿದ್ದ ಆದಾಯ ತೆರಿಗೆ ವಂಚನೆ ಪ್ರಕರಣಗಳ ವಿಚಾರಣೆ ಕೈಬಿಡುವಂತೆ ಕೋರಿ ಜಯಲಲಿತಾ ಹಾಗೂ ಶಶಿಕಲಾ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ತಳ್ಳಿ ಹಾಕಿದ್ದವು.  ಪ್ರಕರಣದ ವಿಚಾರಣೆಯನ್ನು 4 ತಿಂಗಳಲ್ಲಿ ಪೂರ್ಣ ಗೊಳಿಸುವಂತೆ ಸುಪ್ರೀಂಕೋರ್ಟ್‌,  ಕೆಳ ಹಂತದ ನ್ಯಾಯಾಲಯಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT