ADVERTISEMENT

ಟಿಡಿಪಿಗೆ ಆಘಾತ: ಕಾಂಗ್ರೆಸ್‌ಗೆ ರೇವಂತ್ ರೆಡ್ಡಿ?

ಪಿಟಿಐ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
ಅನುಮುಲ ರೇವಂತ್ ರೆಡ್ಡಿ
ಅನುಮುಲ ರೇವಂತ್ ರೆಡ್ಡಿ   

ಹೈದರಾಬಾದ್: ತೆಲುಗು ದೇಶಂ ಪಕ್ಷದ ತೆಲಂಗಾಣ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಹಾಗೂ ವಿಧಾನಸಭೆಯ ಸದನ ನಾಯಕ ಅನುಮುಲ ರೇವಂತ್ ರೆಡ್ಡಿ ಅವರು ಪಕ್ಷಕ್ಕೆ ಆಘಾತ ನೀಡಿದ್ದು, ಕಾಂಗ್ರೆಸ್ ಸೇರಲಿದ್ದಾರೆ.

ಕಳೆದ ಶುಕ್ರವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ರೆಡ್ಡಿ ಭೇಟಿ ಮಾಡಿದ್ದಾರೆ. ಇವರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ.

ಬದ್ಧವೈರಿಗಳಾದ ತೆಲುಗುದೇಶಂ (ಟಿಡಿಪಿ) ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಮಧ್ಯೆ ಸ್ನೇಹ ಮೂಡಿದೆ ಎಂಬ ವದಂತಿಗಳಿಂದಾಗಿ ಪಕ್ಷದ ಮೇಲೆ ರೇವಂತ್ ರೆಡ್ಡಿ ಅವರಿಗೆ ಸಿಟ್ಟು ಬಂದಿತ್ತು. ಇದಕ್ಕೆ ಪೂರಕವಾಗಿ ಎಂಬಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಪೆರಿಟಾಲ ರವಿಯ ಮಗನ ಮದುವೆಯಲ್ಲಿ ಭಾಗಿಯಾಗಿದ್ದರು. ಹಿರಿಯ ಟಿಡಿಪಿ ಮುಖಂಡ ಪಯ್ಯವುಲ ಕೇಶವ ಅವರನ್ನು ಹೆಲಿಪ್ಯಾಡ್‌ನಲ್ಲಿ ಭೇಟಿಯಾಗಿದ್ದರು.

ADVERTISEMENT

ತೆಲಂಗಾಣದಲ್ಲಿ ಟಿಆರ್‌ಎಸ್–ಟಿಡಿಪಿ ಮಧ್ಯೆ ಮೈತ್ರಿ ಏರ್ಪಡಲಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಚುನಾವಣೆ ಸಮೀಪದಲ್ಲಿರುವಾಗ ಪಕ್ಷ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದರು. ಟಿಆರ್‌ಎಸ್‌ ಆರೋಪಿಸಿದ್ದ ಮತಕ್ಕಾಗಿ ಹಣ ಪ್ರಕರಣದಲ್ಲಿ ಜೈಲಿನಲ್ಲಿದ್ದು ಬಂದಿದ್ದ ರೇವಂತ್ ರೆಡ್ಡಿ ಅವರ ಮುನಿಸಿಗೆ ಇದು ಕಾರಣ. ತೆಲಂಗಾಣದಲ್ಲಿ ಪಕ್ಷವನ್ನು ಉಳಿಸಿಕೊಳ್ಳಲು ಟಿಆರ್‌ಎಸ್ ಜೊತೆ ಮೈತ್ರಿಗೆ ಚಂದ್ರಬಾಬು ನಾಯ್ಡು ಮುಂದಾದ ಕಾರಣ ರೇವಂತ್ ಕಾಂಗ್ರೆಸ್ ಜೊತೆ ಹೋಗಲು ನಿರ್ಧರಿಸಿದ್ದಾರೆ.

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರೇವಂತ್ ಬೇಡಿಕೆಯಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಅವರಿಂದ ಇದಕ್ಕೆ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.