ADVERTISEMENT

ಡೀಸೆಲ್‌ ಮಾರಾಟ ನಷ್ಟ ಇಳಿಕೆ

ಬೆಲೆ ನಿಗದಿ ಶೀಘ್ರವೇ ನಿಯಂತ್ರಣ ಮುಕ್ತ?

​ಪ್ರಜಾವಾಣಿ ವಾರ್ತೆ
Published 17 ಜೂನ್ 2014, 19:30 IST
Last Updated 17 ಜೂನ್ 2014, 19:30 IST

ನವದೆಹಲಿ: ಡೀಸೆಲ್‌ ಉತ್ಪಾದನಾ ವೆಚ್ಚ ಮತ್ತು ಚಿಲ್ಲರೆ ಮಾರಾಟ ದರದ ನಡುವಣ ಅಂತರ ಪ್ರತಿ ಲೀಟರ್‌ಗೆ ರೂ.1.62ಕ್ಕೆ ತಗ್ಗಿದ್ದು, ಮಾರಾಟ ದರದಲ್ಲಿ ಆಗುತ್ತಿದ್ದ ನಷ್ಟದ ಪ್ರಮಾಣ ಇಳಿಕೆ ಆಗಿದೆ. ಇದರಿಂದ ಡೀಸೆಲ್‌ ಬೆಲೆ ನಿಗದಿಯು ಸರ್ಕಾರಿ ನಿಯಂತ್ರಣದಿಂದ ಮುಕ್ತವಾಗುವ ಸಾಧ್ಯತೆ ಇದೆ.

ಈ ಮೂಲಕ ಸರ್ಕಾರದ ಮೇಲಿನ ಸಬ್ಸಿಡಿ ಹೊರೆ ಕಡಿಮೆಯಾಗಿ, ಇನ್ನು ಮುಂದೆ ಪೆಟ್ರೋಲಿಯಂ ಉತ್ಪನ್ನ­ಗಳಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಮತ್ತು ಸೀಮೆಎಣ್ಣೆಗೆ ಮಾತ್ರ ಸಬ್ಸಿಡಿ ಮುಂದುವರಿಯಲಿದೆ ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.

ಜೂನ್‌ ತಿಂಗಳ ಮೊದಲ ಎರಡು ವಾರಗಳಲ್ಲಿ ಡೀಸೆಲ್‌ ಉತ್ಪಾದನಾ ವೆಚ್ಚ ಮತ್ತು ಚಿಲ್ಲರೆ ಮಾರಾಟ ದರದ ನಡುವಣ ವ್ಯತ್ಯಾಸ ರೂ.2.80ರಿಂದ ರೂ.1.62ಕ್ಕೆ ತಗ್ಗಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ಡೀಸೆಲ್‌ಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಕೃಷಿ ವಲಯದಲ್ಲಿ ಡೀಸೆಲ್‌ ಅತ್ಯಧಿಕ ಪ್ರಮಾಣದಲ್ಲಿ ಬಳಕೆ ಆಗುತ್ತಿದೆ.

ಡಾಲರ್‌ ಎದುರು ರೂಪಾಯಿ ವಿನಿಮಯ ಮೌಲ್ಯ ಚೇತರಿಕೆ ಕಂಡರೆ ಮತ್ತು ಈಗಿರುವಂತೆ ಪ್ರತಿ ತಿಂಗಳು ಪ್ರತಿ ಲೀಟರ್‌ ಡೀಸೆಲ್‌ಗೆ ಸರಾಸರಿ 50 ಪೈಸೆ ಏರಿಕೆ ಕಾಯ್ದುಕೊಂಡರೆ ಮುಂದಿನ ಸೆಪ್ಟೆಂಬರ್‌ ವೇಳೆಗೆ ಡೀಸೆಲ್‌ ದರ ನಿಗದಿಯು ಸರ್ಕಾರಿ ನಿಯಂತ್ರಣದಿಂದ ಮುಕ್ತವಾಗುವ ಸಾಧ್ಯತೆ ಇದೆ ಎಂದು ಹೇಳಿಕೆ ತಿಳಿಸಿದೆ.

2013ರ ಜನವರಿಯಿಂದ ಈವರೆಗೆ 16 ಕಂತುಗಳಲ್ಲಿ ಡಿಸೇಲ್‌ ದರ ಏರಿಕೆ ಆಗಿದೆ. ಇದರಿಂದ ಪ್ರತಿ ಲೀಟರ್‌ಗೆ ಸರಾಸರಿ ರೂ.10.12 ಹೆಚ್ಚಳವಾಗಿದೆ. ಈಗ ಸರ್ಕಾರ ಡೀಸೆಲ್‌ಗೆ ನೀಡುತ್ತಿರುವ ಎಲ್ಲಾ ರೀತಿಯ ಸಬ್ಸಿಡಿಯನ್ನು ಸ್ಥಗಿತ ಗೊಳಿಸುವ ಬಗ್ಗೆ ಚಿಂತಿಸುತ್ತಿದೆ. ಪೆಟ್ರೋಲ್‌ ಮೇಲಿನ ಸಬ್ಸಿಡಿಯನ್ನು 2010ರ ಜೂನ್‌ನಲ್ಲೇ ನಿಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.