ADVERTISEMENT

ತಮಿಳುನಾಡಿನಲ್ಲಿ ಹಾಲಿನ ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 11:24 IST
Last Updated 25 ಅಕ್ಟೋಬರ್ 2014, 11:24 IST

ಚೆನ್ನೈ (ಪಿಟಿಐ/ಐಎಎನ್‌ಎಸ್‌): ಹಾಲು ಉತ್ಪಾದಕರ ಬೇಡಿಕೆಗೆ ಸ್ಪಂದಿಸಲು ಪ್ರತಿ ಲೀಟರ್ ಹಾಲಿನ ಬೆಲೆಯನ್ನು 10 ರೂಪಾಯಿ ಹೆಚ್ಚಿಸುವುದಾಗಿ  ತಮಿಳುನಾಡು ಸರ್ಕಾರ ಶನಿವಾರ ಪ್ರಕಟಿಸಿದೆ.

ಸರ್ಕಾರದ ದರ ಏರಿಕೆ ನಿರ್ಧಾರವನ್ನು ಖಂಡಿಸಿರುವ ಪ್ರತಿಪಕ್ಷಗಳು, ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ದರ ಏರಿಕೆ ಆಗಿರಲಿಲ್ಲ ಎಂದು ಟೀಕಿಸಿವೆ.

ಗ್ರಾಹಕರಿಗೆ ಒದಗಿಸುವ ಹಾಲಿನ ದರದಲ್ಲಿ ತಮಿಳುನಾಡು ಸರ್ಕಾರ ಮೂರು ವರ್ಷಗಳಿಂದಲೂ ಏರಿಕೆ ಮಾಡಿರಲಿಲ್ಲ.

ADVERTISEMENT

‘ಹಾಲು ಉತ್ಪಾದಕರಿಗೆ ನೀಡುವ ಹಣಕ್ಕೆ ತೊಂದರೆಯಾಗದಂತೆ ಹಾಗೂ ಗ್ರಾಹಕರಿಗೆ ಪೂರೈಸುವ ಹಾಲಿನ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದಿರಲು ದರ ಏರಿಕೆ ಪ್ರಕಟಣೆ ಸರ್ಕಾರಕ್ಕೆ ಅನಿವಾರ್ಯವಾಗಿದೆ’ ಎಂದು ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಲೀಟರ್ ಟೋನ್ಡ್ ಹಾಲಿನ ದರ 24 ರೂಪಾಯಿಯಿಂದ 34 ರೂಪಾಯಿಗೆ ಹೆಚ್ಚಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ರಾಜ್ಯದ 22.5 ಲಕ್ಷ ಹಾಲು ಉತ್ಪಾದಕರ ಬೇಡಿಕೆ ಹಿನ್ನೆಲೆಯಲ್ಲಿ ಹಾಲು ಸಂಗ್ರಹಣೆ ದರವನ್ನೂ ಸರ್ಕಾರ ಹೆಚ್ಚಿಸಿದ್ದು, ಎಮ್ಮೆ ಹಾಗೂ ಹಸುವಿನ ಹಾಲಿನ ದರ ಪ್ರತಿ ಲೀಟರಿಗೆ ಕ್ರಮವಾಗಿ ನಾಲ್ಕು ಹಾಗೂ ಐದು ರೂಪಾಯಿ ಏರಿಕೆಯಾಗಲಿದೆ.

ಮೇವಿನ ದರ, ದನಗಳ ಬೆಲೆ ಹಾಗೂ ಇತರೆ ಬೆಲೆಗಳು ಹೆಚ್ಚಿರುವ ಕಾರಣ ದರ ಹೆಚ್ಚಿಸುವಂತೆ ಹಾಲು ಉತ್ಪಾದಕರು ಒತ್ತಾಯಿಸಿದ್ದರು.

ಉತ್ಪಾದಕರಿಗೆ ಪರಿಷ್ಕೃತ ದರಗಳು ನವೆಂಬರ್ 1ರಿಂದ ಅನ್ವಯವಾಗುವ ಸಾಧ್ಯತೆಗಳಿದ್ದು, ಆಕಳ ಹಾಲಿನ ದರ ಪ್ರತಿ ಲೀಟರಿಗೆ 23ರಿಂದ 28 ರೂಪಾಯಿ ಹಾಗೂ ಎಮ್ಮೆ ಹಾಲಿನ ಬೆಲೆ 31ರಿಂದ 35ಕ್ಕೆ ಹೆಚ್ಚಲಿದೆ.

ಈ ವರ್ಷದ ಜನವರಿ 1ರಂದು ಹಾಲು ಸಂಗ್ರಹಣಾ ದರವನ್ನು ಮೂರು ರೂಪಾಯಿ ಹೆಚ್ಚಿಸಲಾಗಿತ್ತು. ಆದರೆ ಗ್ರಾಹಕರಿಗೆ ಒದಗಿಸುವ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.