ADVERTISEMENT

ತಮಿಳುನಾಡು: ಪಟ್ಟಕ್ಕೇರಿದ ಪಳನಿ

ಫಲಕೊಡದ ಪನ್ನೀರ್‌ ಬಂಡಾಯ

ಪಿಟಿಐ
Published 16 ಫೆಬ್ರುವರಿ 2017, 20:11 IST
Last Updated 16 ಫೆಬ್ರುವರಿ 2017, 20:11 IST
ಜಯಲಲಿತಾ ಸಮಾಧಿಗೆ ನಮಿಸಿದ ಪಳನಿಸ್ವಾಮಿ         ಎಎಫ್‌ಪಿ ಚಿತ್ರ
ಜಯಲಲಿತಾ ಸಮಾಧಿಗೆ ನಮಿಸಿದ ಪಳನಿಸ್ವಾಮಿ ಎಎಫ್‌ಪಿ ಚಿತ್ರ   

ಚೆನ್ನೈ : ಕಳೆದ ಹತ್ತು ದಿನಗಳಲ್ಲಿ ನಡೆದ ರಾಜಕೀಯ ಮೇಲಾಟದ ಬಳಿಕ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಗುರುವಾರ ಸಂಜೆ 4.30ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ವಿರುದ್ಧ ಉಸ್ತುವಾರಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರು ಬಂಡಾಯವೆದ್ದ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆ ಆರಂಭವಾಗಿತ್ತು.

ಒಂಬತ್ತು ತಿಂಗಳಲ್ಲಿ ಮೂರನೇ ಮುಖ್ಯಮಂತ್ರಿಯಾಗಿ ಪಳನಿಸ್ವಾಮಿ ಅವರಿಗೆ ರಾಜ್ಯಪಾಲ ಸಿ.ಎಚ್‌. ವಿದ್ಯಾಸಾಗರ ರಾವ್‌ ಪ್ರಮಾಣ ಬೋಧಿಸಿದರು. ಪಳನಿಸ್ವಾಮಿ ಸಂಪುಟಕ್ಕೆ 30 ಸಚಿವರು ಸೇರ್ಪಡೆಯಾಗಿದ್ದಾರೆ.

2016ರ ವಿಧಾನಸಭೆ ಚುನಾವಣೆಯಲ್ಲಿ ಸತತ ಎರಡನೇ ಅವಧಿಗೆ ಪಕ್ಷವನ್ನು ಅಧಿಕಾರಕ್ಕೆ ತಂದು ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದರು. 74 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಗಲೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು.

ಡಿ. 5ರಂದು ಜಯಲಲಿತಾ ನಿಧನರಾದ ಕೆಲವೇ ಕ್ಷಣಗಳಲ್ಲಿ ಅವರ ನಿಷ್ಠಾವಂತ ಪನ್ನೀರ್‌ಸೆಲ್ವಂ ಮುಖ್ಯಮಂತ್ರಿಯಾದರು. ಫೆ. 5ರಂದು ಶಶಿಕಲಾ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ ಪನ್ನೀರ್‌ಸೆಲ್ವಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಎರಡು ದಿನಗಳ ನಂತರ ಅವರು ಶಶಿಕಲಾ ಮುಖ್ಯಮಂತ್ರಿಯಾಗುವುದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ತಮಿಳುನಾಡಿನ ಜನರು ಮತ್ತು ಎಐಎಡಿಎಂಕೆ ಕಾರ್ಯಕರ್ತರು ಬಯಸಿದರೆ ಮತ್ತೆ ಮುಖ್ಯಮಂತ್ರಿಯಾಗಲು ಸಿದ್ಧ ಎಂದೂ ಅವರು ಹೇಳಿಕೆ ನೀಡಿದ್ದರು.

ಪನ್ನೀರ್‌ಸೆಲ್ವಂ ಬಂಡಾಯದ ಕಹಳೆ ತಮಿಳುನಾಡನ್ನು ರಾಜಕೀಯ ಬಿಕ್ಕಟ್ಟಿನೆಡೆಗೆ ತಳ್ಳಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಅವರಿಗೆ ಬೆಂಗಳೂರಿನ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಎತ್ತಿ ಹಿಡಿದ ಕಾರಣ ಅವರು ಬುಧವಾರ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಹೀಗಾಗಿ ಶಾಸಕಾಂಗ ಪಕ್ಷದ ಮುಖ್ಯಸ್ಥನಾಗಿ ತಮ್ಮ ನಿಷ್ಠಾವಂತ ಪಳನಿಸ್ವಾಮಿ ಆಯ್ಕೆಯಾಗುವಂತೆ ಶಶಿಕಲಾ ನೋಡಿಕೊಂಡಿದ್ದರು.

ಪಾಂಡ್ಯನ್‌ಗೆ ಸ್ಥಾನವಿಲ್ಲ: ಜಯಲಲಿತಾ ಮತ್ತು ನಂತರದ ಪನ್ನೀರ್‌ಸೆಲ್ವಂ ಸಂಪುಟದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಕೆ. ಪಾಂಡ್ಯನ್‌ ಅವರನ್ನು ಹೊರತುಪಡಿಸಿ ಇತರ ಎಲ್ಲರಿಗೂ ಈಗಿನ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ರಾಜಕೀಯ ಬಿಕ್ಕಟ್ಟು ಸಂದರ್ಭದಲ್ಲಿ ಪಾಂಡ್ಯನ್‌ ಅವರು ಪನ್ನೀರ್‌ಸೆಲ್ವಂ ಪರ ನಿಂತಿದ್ದರು.
ಪಾಂಡ್ಯನ್‌ ಖಾತೆಗಳನ್ನು ಕೆ.ಎ. ಸೆಂಗೊಟ್ಟೈಯನ್‌ ಅವರಿಗೆ ನೀಡಲಾಗಿದೆ. ಪಳನಿಸ್ವಾಮಿ ಸಂಪುಟದಲ್ಲಿ ಇವರೊಬ್ಬರೇ ಹೊಸ ಮುಖ.

ಶನಿವಾರ ವಿಶ್ವಾಸಮತ
ಪಳನಿಸ್ವಾಮಿ ವಿಶ್ವಾಸಮತ ಕೋರುವುದಕ್ಕಾಗಿ ಶನಿವಾರ ಬೆಳಗ್ಗೆ 11 ಕ್ಕೆ ತಮಿಳುನಾಡು ವಿಧಾನಸಭೆ ಸ್ಪೀಕರ್‌ ಪಿ. ಧನಪಾಲ್‌ ವಿಶೇಷ ಅಧಿವೇಶನ ಕರೆದಿದ್ದಾರೆ.

ಜೈಲಿನಲ್ಲಿ ಪ್ರಮಾಣ ವಚನ ವೀಕ್ಷಿಸಿದ ಶಶಿಕಲಾ!
ಬೆಂಗಳೂರು: 
ಎಡಪ್ಪಾಡಿ ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣದ ನೇರಪ್ರಸಾರವನ್ನು ಶಶಿಕಲಾ ಜೈಲಿನಲ್ಲೇ ವೀಕ್ಷಿಸಿದರು.

ADVERTISEMENT

ರಾಜ್ಯಕ್ಕೆ ಖರ್ಚು ₹ 12 ಕೋಟಿ
ಬೆಂಗಳೂರು:
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ   ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ  ಪ್ರಕ್ರಿಯೆ ಮತ್ತು ಅವರಿಗೆ ನೀಡಲಾದ ರಕ್ಷಣೆ, ಬಂದೋಬಸ್ತ್‌ಗೆ ಕರ್ನಾಟಕ ಸರ್ಕಾರ ₹12.04 ಕೋಟಿ ವೆಚ್ಚ ಮಾಡಿದೆ. ಈ ಹಣವನ್ನು ವಾಪಸ್‌ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ  ಕರ್ನಾಟಕ ಸರ್ಕಾರ ಈಗಾಗಲೇ ಪತ್ರ ಬರೆದಿದೆ.

ಶಶಿಕಲಾ ಆಯ್ಕೆ ಪ್ರಶ್ನಿಸಿ ಆಯೋಗಕ್ಕೆ ದೂರು
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ವಿ.ಕೆ.ಶಶಿಕಲಾ ಆಯ್ಕೆಯನ್ನು ಪ್ರಶ್ನಿಸಿ ಪನ್ನೀರ್‌ಸೆಲ್ವಂ ಬಣ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.