ADVERTISEMENT

ತರುಣಿಯರಿಗೆ ಮೊಬೈಲ್‌ ನಿಷೇಧಿಸಿದ ಬಿಹಾರ ಪಂಚಾಯ್ತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2014, 13:23 IST
Last Updated 19 ಡಿಸೆಂಬರ್ 2014, 13:23 IST

ಗೋಪಾಲ್‌ಗಂಝ್‌ (ಪಿಟಿಐ): ಜೀನ್ಸ್‌ ಧರಿಸಿದರೆ, ಮೊಬೈಲ್‌ ಬಳಸಿದರೆ ಹುಡುಗಿಯರು ಅಡ್ಡದಾರಿ ಹಿಡಿಯುತ್ತಾರೆ. ಆದ್ದರಿಂದ ಪಾಲಕರೇ ನಿಮ್ಮ ಹೆಣ್ಣುಮಕ್ಕಳಿಗೆ ಮೊಬೈಲ್‌ ಕೊಡಿಸಬೇಡಿ, ಜೀನ್ಸ್‌ ಧರಿಸಲು ಅವಕಾಶವೇ ನೀಡಬೇಡಿ ಎಂದು ಬಿಹಾರದ ಗೋಪಾಲ್‌ಗಂಝ್‌ ಜಿಲ್ಲೆಯ ಗ್ರಾಮ ಪಂಚಾಯ್ತಿಯೊಂದು ಫರ್ಮಾನು ಹೊರಡಿಸಿದೆ.

ಗೋಪಾಲ್‌ಗಂಝ್‌ನ ಹಥುವಾ ಬ್ಲಾಕ್‌ನಲ್ಲಿರುವ ಸಿಂಘಾ ಪಂಚಾಯ್ತಿಯೇ ಈ ಕಟ್ಟಪ್ಪಣೆ ಹೊರಡಿಸಿರುವುದು.

ಪಂಚಾಯ್ತಿ ಮುಖ್ಯಸ್ಥ ಕೃಷ್ಣ ಚೌಧರಿ ಅವರ ಆಜ್ಞೆ ಪ್ರಕಾರ,  ಹುಡುಗಿಯರು ಜೀನ್ಸ್‌ ಧರಿಸಿದರೆ, ಮೊಣಕಾಲುದ್ದದ  ಪ್ಯಾಂಟ್‌ ಧರಿಸಿಕೊಂಡು ಓಡಾಡಿದರೆ, ಮೊಬೈಲ್‌ನಲ್ಲಿ ಮಾತನಾಡಿದರೆ ತಪ್ಪು ದಾರಿ ಹಿಡಿಯುತ್ತಾರೆ. ಅಷ್ಟೇ ಅಲ್ಲ, ಇವೆಲ್ಲವೂ ಅವರ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅವರು ಕೆಟ್ಟು ಹೋಗಲು ಇದಕ್ಕಿಂತ ಸುಲಭ ದಾರಿ ಬೇರೆ ಬೇಕಿಲ್ಲ. ಆದ್ದರಿಂದ ನಮ್ಮ ಗ್ರಾಮದ ಹುಡುಗಿಯರು ಇನ್ನು ಮುಂದೆ ಮೊಬೈಲ್‌ ಬಳಸುವಂತಿಲ್ಲ. ಜೀನ್ಸ್‌ ತೊಡುವಂತಿಲ್ಲ ಎಂದಿದ್ದಾರೆ. 

ಹೊಸ ವರ್ಷದ ಮೊದಲ ದಿನದಿಂದ ಈ ನಿಷೇಧ ಜಾರಿಗೆ ಬರಲಿದೆ. ಹೆಣ್ಣು ಮಕ್ಕಳಿಗೆ ಮೊಬೈಲ್‌ ಕೊಡಿಸಿದಂತೆ, ಜೀನ್ಸ್‌ ಧರಿಸಲು ಅವಕಾಶ ನೀಡಿದಂತೆ ಪಾಲಕರಿಗೂ ತಾಕೀತು ಮಾಡಲಾಗಿದೆ. 

   ಗ್ರಾಮಸ್ಥರ ಒಪ್ಪಿಗೆ ಮೇರೆಗೆ ಈ ನಿಷೇಧ ಜಾರಿಗೊಳಿಸಿರುವುದರಿಂದ ಎಲ್ಲರೂ ಇದನ್ನು ಒಪ್ಪುತ್ತಾರೆ ಎಂಬ ವಿಶ್ವಾಸ ಇದೆ. ಹಾಗಾಗಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಕುರಿತು ಚಿಂತಿಸಿಲ್ಲ ಎನ್ನುತ್ತಾರೆ ಕೃಷ್ಣ ಚೌಧರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT