ADVERTISEMENT

ತರೂರ್‌ಗೆ ಸಂಕಷ್ಟ ತಂದ ಮೋದಿ ಹೊಗಳಿಕೆ

ಹೈಕಮಾಂಡ್‌ಗೆ ದೂರು ನೀಡಲು ಕೇರಳ ಕಾಂಗ್ರೆಸ್‌ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2014, 19:30 IST
Last Updated 8 ಅಕ್ಟೋಬರ್ 2014, 19:30 IST

ತಿರುವನಂತಪುರ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಲವು ಸಂದರ್ಭಗಳಲ್ಲಿ ಹೊಗಳಿ­ರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸಲು ಕೇರಳ ಕಾಂಗ್ರೆಸ್‌ ಘಟಕ ನಿರ್ಧರಿಸಿದೆ.

ತರೂರ್‌ ಅವರು ಎರಡನೇ ಅವಧಿಗೆ ತಿರುವನಂತ­ಪುರ ಲೋಕಸಭಾ ಕ್ಷೇತ್ರದಿಂದ ಗೆಲ್ಲುವುದಕ್ಕಾಗಿ ಕಾಂಗ್ರೆಸ್‌ ಮತ್ತು ಸಂಯುಕ್ತ ಪ್ರಜಾಸತ್ತಾತ್ಮಕ ರಂಗದ (ಯುಡಿಎಫ್‌) ಕಾರ್ಯಕರ್ತರು ದಣಿವಿಲ್ಲದೆ ದುಡಿದಿ­ದ್ದಾರೆ. ಆದರೆ ಈಗ ತರೂರ್‌ ಅವರು ಮೋದಿ ಅವ­ರನ್ನು ನಿರಂತರವಾಗಿ ಹೊಗಳುತ್ತಿರುವುದರಿಂದ ಕಾರ್ಯ­ಕರ್ತರ ಮನಸ್ಸಿಗೆ ಘಾಸಿ ಆಗಿದೆ ಎಂದು ಕೇರಳ ಕಾಂಗ್ರೆಸ್‌ ಘಟಕದ ಅಧ್ಯಕ್ಷ ವಿ.ಎಂ. ಸುಧೀರನ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಉಮ್ಮನ್‌ ಚಾಂಡಿ, ಗೃಹ ಸಚಿವ ರಮೇಶ್‌ ಚೆನ್ನಿತಲ ಮತ್ತು ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಹೈಕಮಾಂಡ್‌ಗೆ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ.

‘ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ­ರುವ ರಾಜ್ಯ ಕೇರಳ. ಇಲ್ಲಿನ ಜನರ ಜಾತ್ಯತೀತ ಮತ್ತು ಪ್ರಜಾಸತ್ತಾ­ತ್ಮಕ ಪ್ರಜ್ಞೆ ಅದಕ್ಕೆ ಕಾರಣ. ಅವರ ಸಂವೇದನೆಗಳಿಗೆ ತರೂರ್‌ ನೋವುಂಟು ಮಾಡಿದ್ದಾರೆ’ ಎಂದು ಶ್ರೀಧರನ್‌ ಅಭಿಪ್ರಾಯಪಟ್ಟಿದ್ದಾರೆ.

‘ಸ್ವಚ್ಛ ಭಾರತ ಅಭಿಯಾನ’ದಲ್ಲಿ ಭಾಗಿಯಾಗು­ವಂತೆ ಪ್ರಧಾನಿ ಮೋದಿ ಅವರು ನೀಡಿರುವ ಆಹ್ವಾನ­ವನ್ನು ತರೂರ್‌ ಸ್ವೀಕರಿಸಿದ್ದರು. ನಂತರ ತರೂರ್‌ ವಿರುದ್ಧ ಇಂತಹ ಟೀಕೆಗಳು ಕೇಳಿ ಬರುತ್ತಿವೆ.

ಪ್ರಧಾನಿ ಆಹ್ವಾನವನ್ನು ಒಪ್ಪಿಕೊಂಡ ಮಾತ್ರಕ್ಕೆ ತಾನು ಬಿಜೆಪಿಯ ಹಿಂದುತ್ವ ಕಾರ್ಯಸೂಚಿಯನ್ನು ಒಪ್ಪಿಕೊಂಡಂತೆ ಅಲ್ಲ. ಕಾಂಗ್ರೆಸಿಗನಾಗಿರುವುದು ಹೆಮ್ಮೆಯ ವಿಷಯ ಎಂದು ತರೂರ್‌ ಸ್ಪಷ್ಟನೆಯನ್ನೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.