ADVERTISEMENT

ತಲೆ ಮತ್ತು ಎದೆಗೆ ಏಟು ಬಿದ್ದಿತ್ತು, ಜನರು ಹಲ್ಲೆ ನಡೆಸಿದ್ದೇ ಮಧು ಸಾವಿಗೆ ಕಾರಣ: ಮರಣೋತ್ತರ ಪರೀಕ್ಷಾ ವರದಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 10:55 IST
Last Updated 24 ಫೆಬ್ರುವರಿ 2018, 10:55 IST
ತಲೆ ಮತ್ತು ಎದೆಗೆ ಏಟು ಬಿದ್ದಿತ್ತು, ಜನರು ಹಲ್ಲೆ ನಡೆಸಿದ್ದೇ ಮಧು ಸಾವಿಗೆ ಕಾರಣ: ಮರಣೋತ್ತರ ಪರೀಕ್ಷಾ ವರದಿ
ತಲೆ ಮತ್ತು ಎದೆಗೆ ಏಟು ಬಿದ್ದಿತ್ತು, ಜನರು ಹಲ್ಲೆ ನಡೆಸಿದ್ದೇ ಮಧು ಸಾವಿಗೆ ಕಾರಣ: ಮರಣೋತ್ತರ ಪರೀಕ್ಷಾ ವರದಿ   

ಅಟ್ಟಪ್ಪಾಡಿ: ಜನರ ಗುಂಪು ಹಲ್ಲೆ ನಡೆಸಿರುವುದೇ ಆದಿವಾಸಿ ಯುವಕ ಮಧುವಿನ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದುಬಂದಿದೆ. ಶನಿವಾರ ಬೆಳಗ್ಗೆ ಮಧುವಿನ ಮರಣೋತ್ತರ ಪರೀಕ್ಷೆ ನಡೆದಿದೆ.

ಆಂತರಿಕ ರಕ್ತಸ್ರಾವವೇ ಮರಣಕ್ಕೆ ಕಾರಣ .ಮಧುವಿನ ತಲೆಗೆ ತೀವ್ರ ಏಟು ಬಿದ್ದಿದೆ. ಅಷ್ಟೇ ಅಲ್ಲದೆ ಎದೆಗೂ ಒದೆ ಬಿದ್ದಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಏಟು ಬಿದ್ದ ರಭಸದಲ್ಲಿ ಆತನ ಬೆನ್ನುಮೂಳೆಯೂ ಮುರಿದಿದೆ.

ಇದೊಂದು ಕೊಲೆ ಪ್ರಕರಣ ಆಗಿರುವುದರಿಂದ ಆರೋಪಿಗಳ ವಿರುದ್ಧ ಐಪಿಎಸ್  307, 302, 324 ಸೆಕ್ಷನ್‍ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ತ್ರಿಶ್ಶೂರ್ ವಲಯದ ಐಜಿ, ಎಂ.ಆರ್ ಅಜಿತ್ ಕುಮಾರ್ ಹೇಳಿದ್ದಾರೆ. ಇದರೊಂದಿಗೆ ಎಸ್‍ಸಿಎಸ್‍ಟಿ ಕಾಯ್ದೆಯಡಿಯಲ್ಲಿಯೂ ಕೇಸು ದಾಖಲಿಸಲಾಗುವುದು.

ADVERTISEMENT

ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ತ್ರಿಶ್ಶೂರ್ ಮೆಡಿಕಲ್ ಕಾಲೇಜಿಗೆ ಮಧುವಿನ ಮೃತದೇಹ  ಕರೆತರಲಾಗಿತ್ತು. ಶನಿವಾರ ಬೆಳಗ್ಗೆ 11.30ಕ್ಕೆ ಮರಣೋತ್ತರ ಪರೀಕ್ಷೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಮಂದಿಯನ್ನು ಬಂಧಿಸಿದ್ದು, ಇನ್ನು ನಾಲ್ವರಿಗಾಗಿ ಶೋಧ ನಡೆಯುತ್ತಿದೆ.

ಮಧುವಿನ ಕುಟುಂಬಕ್ಕೆ 10 ಲಕ್ಷ ಪರಿಹಾರ ಧನವನ್ನು ಕೇರಳ ಸರ್ಕಾರ  ಘೋಷಿಸಿದೆ.

ಮೂರು ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆದಿತ್ತು, ಇದಾದ ನಂತರ ಮೃತಹೇಹವನ್ನು ಅಟ್ಟಪ್ಪಾಡಿಗೆ ಒಯ್ಯಲಾಗಿದೆ.

ಏನಿದು ಪ್ರಕರಣ?
ಮುಕ್ಕಾಲಿ ಎಂಬಲ್ಲಿ ಆಹಾರವನ್ನು ಕಳ್ಳತನ ಮಾಡಿದ್ದಕ್ಕಾಗಿ ಅಟ್ಟಪ್ಪಾಡಿ ಕಡುಕಮಣ್ಣ ಎಂಬಲ್ಲಿ ವಾಸಿಸುತ್ತಿದ್ದ ಆದಿವಾಸಿ ಯುವಕ ಮಧು ಎಂಬಾತನನ್ನು ಗ್ರಾಮಸ್ಥರು ಸೆರೆ ಹಿಡಿದು ಥಳಿಸಿದ್ದರು. ನಂತರ ಪೊಲೀಸರ ವಶಕ್ಕೊಪ್ಪಿಸಿದ್ದರು. ಗ್ರಾಮಸ್ಥರಿಂದ ತೀವ್ರ ಹಲ್ಲೆಗೊಳಗಾದ ಮಧು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದ ದಾರಿ ಮಧ್ಯೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ ಮಧುವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.