ADVERTISEMENT

ತೃಣಮೂಲ ಸಂಸದ ಬೋಸ್‌ ಬಂಧನ

ಶಾರದಾ ಚಿಟ್‌ಫಂಡ್‌ ಹಗರಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಕೋಲ್ಕತ್ತ (ಪಿಟಿಐ): ಶಾರದಾ ಚಿಟ್‌­ಫಂಡ್‌ ಹಗರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ವಿಶೇಷ ತನಿಖಾ ತಂಡ ಶುಕ್ರವಾರ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ರಾಜ್ಯಸಭಾ ಸದಸ್ಯ ಸೃಂಜಯ್‌ ಬೋಸ್‌ ಅವರನ್ನು ಐದು ಗಂಟೆಗಳ ತೀವ್ರ ವಿಚಾರಣೆಯ  ನಂತರ ಬಂಧಿಸಿದೆ.

ಸೃಂಜಯ್‌ ಅವರನ್ನು ಶನಿವಾರ ಅಲಿಪುರ್‌ ಕೋರ್ಟ್‌ಗೆ ಹಾಜರು­ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಂಗಾಳಿ ದಿನಪತ್ರಿಕೆ­ಯೊಂದರ ಮಾಲೀಕ­­ರಾಗಿರುವ ಸೃಂಜಯ್‌ ಅವರು, ಶಾರದಾ ಸಮೂಹದ ಮುಖ್ಯಸ್ಥ ಸುದೀಪ್ತೊ ಸೆನ್‌ ಜತೆ ನಡೆಸಿದ ವ್ಯವ­ಹಾರಕ್ಕೆ ಸಂಬಂಧಿಸಿ­ ಸುದೀರ್ಘ ವಿಚಾರಣೆ ನಡೆಸಿದಾಗ ಅವ್ಯವಹಾರದಲ್ಲಿ ಭಾಗಿ­ಯಾ­ಗಿರು­ವುದು ಮೇಲ್ನೋಟಕ್ಕೆ ಕಂಡು ಬಂತು.  ಹಾಗಾಗಿ ಅವರನ್ನು  ಬಂಧಿಸ­ಲಾಯಿತು ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಸೆನ್‌ ಅವರಿಗೆ ಸಿಮೆಂಟ್‌ ಕಂಪೆನಿ­ಯೊಂದರ ಷೇರುಗಳನ್ನು ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಜವಳಿ ಸಚಿವ ಶ್ಯಾಮಪಾದ ಮುಖರ್ಜಿ ಮತ್ತು ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದ ಸೋಮೇನ್‌ ಮಿತ್ರಾ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಶಾರದಾ ಸಮೂಹ ಮುಖ್ಯಸ್ಥ ಸೆನ್‌, ತೃಣಮೂಲ ಸಂಸದ ಕುನಾಲ್‌ ಘೋಷ್‌ ಮತ್ತು ಪಶ್ಚಿಮ ಬಂಗಾಳದ ಮಾಜಿ ಪೊಲೀಸ್‌ ಮಹಾ ನಿರ್ದೇಶಕ ರಜತ್‌ ಮಜುಂದಾರ್‌ ಬಂಧಿತರಲ್ಲಿ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.