ADVERTISEMENT

ತೆರಿಗೆ ಮುಕ್ತ ಗ್ರಾಚ್ಯುಟಿ ಮೊತ್ತ ದ್ವಿಗುಣ

ಮಸೂದೆಗೆ ಲೋಕಸಭೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:57 IST
Last Updated 22 ಮಾರ್ಚ್ 2018, 20:57 IST

ನವದೆಹಲಿ: ತೆರಿಗೆ ಮುಕ್ತ ಗ್ರಾಚ್ಯುಟಿ ಮೊತ್ತವನ್ನು ಈಗಿನ ₹10 ಲಕ್ಷದಿಂದ ₹20 ಲಕ್ಷಕ್ಕೆ ಏರಿಸುವ ಮಸೂದೆಗೆ ಲೋಕಸಭೆಯು ಗುರುವಾರ ಅನುಮೋದನೆ ನೀಡಿದೆ.

ಗ್ರಾಚ್ಯುಟಿ ಪಾವತಿ (ತಿದ್ದುಪಡಿ) ಮಸೂದೆ 2017ಕ್ಕೆ ರಾಜ್ಯಸಭೆ ಈಗಾಗಲೇ ಒಪ್ಪಿಗೆ ನೀಡಿದೆ. ಕಾರ್ಮಿಕ ಸಚಿವ ಸಂತೋಷ್‌ ಗುಮಾರ್‌ ಗಂಗ್ವಾರ್‌ ಅವರು ಮಸೂದೆಯನ್ನು ಕಳೆದ ವಾರ ಲೋಕಸಭೆಯಲ್ಲಿ ಮಂಡಿಸಿದ್ದರು. ‌

ಖಾಸಗಿ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ನೌಕರರಿಗೆ ಸಮಾನವಾದ ತೆರಿಗೆ ಮುಕ್ತ ಗ್ರಾಚ್ಯುಟಿ ಮೊತ್ತವನ್ನು ನೀಡಲು ಈ ಮಸೂದೆಯು ಅವಕಾಶ ಕೊಡುತ್ತದೆ. ಕೇಂದ್ರ ಸರ್ಕಾರದ ನೌಕರರ ಗ್ರಾಚ್ಯುಟಿ ತೆರಿಗೆ ಮುಕ್ತ ಗ್ರಾಚ್ಯುಟಿ ಮೊತ್ತವನ್ನು ಏಳನೇ ವೇತನ ಆಯೋಗದ ಶಿಫಾರಸಿನಂತೆ ಈಗಾಗಲೇ ದ್ವಿಗುಣಗೊಳಿಸಲಾಗಿದೆ.

ADVERTISEMENT

ಹತ್ತು ಮತ್ತು ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಗ್ರಾಚ್ಯುಟಿ ಕಾಯ್ದೆ ಅನ್ವಯವಾಗುತ್ತದೆ. ಕೆಲಸ ಮಾಡಿದ ಅವಧಿ ಮತ್ತು ಕೊನೆಯ ತಿಂಗಳ ವೇತನದ ಆಧಾರದಲ್ಲಿ ಗ್ರಾಚ್ಯುಟಿ ಲೆಕ್ಕ ಹಾಕಲಾಗುತ್ತದೆ. ಒಂದು ವರ್ಷದ ಕೆಲಸಕ್ಕೆ 15 ದಿನಗಳ ಮೂಲವೇತನ ಮತ್ತು ತುಟ್ಟಿಭತ್ಯೆ ಮೊತ್ತವನ್ನು ಗ್ರಾಚ್ಯುಟಿಯಾಗಿ ನೀಡಲಾಗುತ್ತದೆ. ಉದ್ಯೋಗಿಯು ಕೆಲಸ ಮಾಡಿದ ವರ್ಷಗಳ ಸಂಖ್ಯೆಗೆ ಈ ಮೊತ್ತವನ್ನು ಗುಣಿಸಲಾಗುತ್ತದೆ. ಉದ್ಯೋಗಿಯು ನಿವೃತ್ತಿಯಾದಾಗ ಅಥವಾ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಈ ಹಣವನ್ನು ನೀಡಲಾಗುತ್ತದೆ.

ಗ್ರಾಚ್ಯುಟಿಯ ಗರಿಷ್ಠ ಮೊತ್ತವನ್ನು ಕಾಲ ಕಾಲಕ್ಕೆ ಹೆಚ್ಚಿಸುವ ಅಧಿಕಾರವನ್ನು ಮಸೂದೆಯು ಸರ್ಕಾರಕ್ಕೆ ನೀಡುತ್ತದೆ. ಇದಕ್ಕಾಗಿ ಕಾನೂನು ತಿದ್ದುಪಡಿಯ ಅಗತ್ಯ ಇರುವುದಿಲ್ಲ. ಮಹಿಳಾ ಉದ್ಯೋಗಿಗಳ ಹೆರಿಗೆ ರಜೆಯನ್ನು ಈಗಿರುವ 12 ವಾರಗಳಿಗಿಂತ ಹೆಚ್ಚಿಸುವ ಅಧಿಕಾರವನ್ನೂ ಈ ಮಸೂದೆಯು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.