ADVERTISEMENT

ತೆಲಂಗಾಣ ರಾಜ್ಯೋದಯ

ಮೊದಲ ಮುಖ್ಯಮಂತ್ರಿಯಾಗಿ ಇಂದು ಕೆಸಿಆರ್ ಪ್ರಮಾಣ ವಚನ

ಎನ್.ಉದಯಕುಮಾರ್
Published 1 ಜೂನ್ 2014, 20:45 IST
Last Updated 1 ಜೂನ್ 2014, 20:45 IST

ಹೈದರಾಬಾದ್‌: ಚಳವಳಿ, ಪ್ರತಿಭಟನೆ­ಗಳಿಂದ ಪದೇ ಪದೇ ಬಿಗುವಿನ ವಾತಾವರಣ ನೆಲೆಗೊಳ್ಳುತ್ತಿದ್ದ ಕಡೆ, ಸಂತಸ ಚಿಮ್ಮುತ್ತಿದೆ. ಪ್ರತ್ಯೇಕ ರಾಜ್ಯ­ಕ್ಕಾಗಿ ಗರ್ಜಿಸಿದ ಲಕ್ಷಾಂತರ ಕಂಠಗಳು, ಹೆಗ್ಗುರಿ ಸಾಧಿಸಿದ ಖುಷಿಯಲ್ಲಿ ಕೇಕೆ ಹಾಕಲು ಕಾದಿವೆ. ತೆಲಂಗಾಣದ ‘ಹೊಸ ಹುಟ್ಟಿಗೆ’ ಸಾಕ್ಷಿಯಾಗಲು ಮುತ್ತಿನ ನಗರಿ ಅಣಿಯಾಗಿದೆ.

ಒಂದೇ ಭಾಷೆ ಆಡುವ ಜನರು. ಆದರೂ ಪರಕೀಯ ಭಾವ! ಪಾಳೆಗಾರಿಕೆ ಮನಸ್ಥಿತಿಯ ರಾಜಕೀಯ ವ್ಯವಸ್ಥೆ ಸೃಷ್ಟಿಸಿದ ನವವಸಾಹತಿನ 57 ವರ್ಷಗಳ ವ್ಯಥೆ ಕೊನೆಗೊಂಡಿದೆ. ‘ಬಿಡುಗಡೆ ಮುಹೂರ್ತ’ ಸೋಮ­ವಾರಕ್ಕೆ (ಜೂನ್‌ 2) ನಿಗದಿ ಆಗಿದೆ. ಈ ಕಾರಣಕ್ಕಾಗಿ ತೆಲಂಗಾಣದ ಹತ್ತೂ ಜಿಲ್ಲೆಗಳಲ್ಲಿ ‘ಸ್ವಾತಂತ್ರ್ಯ’ದ ಸಡಗರ.

ಭಾರತದ ರಾಜಕೀಯ ಭೂಪಟ­ದಲ್ಲಿ 29ನೇ ರಾಜ್ಯವಾಗಿ ತೆಲಂಗಾಣ ಸೋಮವಾರ ವಿಧ್ಯುಕ್ತ­ವಾಗಿ ಸ್ಥಾನ ಪಡೆಯಲಿದೆ. ಆಂಧ್ರಪ್ರದೇಶ ಜತೆ ಕರುಳಬಳ್ಳಿ ಸಂಬಂಧ ಕಡಿದುಕೊಳ್ಳುವ ಈ ಪರ್ವ ದಿನವೇ ನವ ತೆಲಂಗಾಣದ ಮೊದಲ ಮುಖ್ಯ­ಮಂತ್ರಿ­ಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಪ್ರಮಾಣ ವಚನ ಸ್ವೀಕರಿಸಲಿರುವುದು ವಿಶೇಷ.

ತನ್ನ ಅಸ್ಮಿತೆ ಸಾಬೀತು ಮಾಡಲು ಅತ್ಯಂತ ದೀರ್ಘ ಹೋರಾಟ ನಡೆಸಿದ ಪ್ರಾಂತ್ಯ ತೆಲಂಗಾಣ. 1969ರಷ್ಟು ಹಿಂದೆಯೇ ಪ್ರತ್ಯೇಕ ರಾಜ್ಯದ ಕೂಗು ಎದ್ದಿತ್ತು. ನಂತರ ಬೇರೆ ಬೇರೆ ರೂಪ­ದಲ್ಲಿ ಅದು ಪ್ರತಿಧ್ವನಿಸುತ್ತಲೇ ಇತ್ತು. ಆ ಕೂಗಿಗೆ ಈಗ ಮನ್ನಣೆ ದೊರೆತು, ತೆಲಂಗಾಣ ಹೆಸರಿನಲ್ಲಿ ಹೊಸ ರಾಜ್ಯ ಉದಯಿಸಲಿದೆ. ಅದರೊಟ್ಟಿಗೆ ಪ್ರಮಾಣ ವಚನ ಗಳಿಗೆಯೂ ಮೇಳವಿಸಿದ್ದರಿಂದ ಸಂಭ್ರಮ ಸಾವಿರ ಪಟ್ಟು ಹೆಚ್ಚಿದೆ.

ತೆಲಂಗಾಣ ಎಂಬ ನವಜಾತ ಶಿಶುವಿನ ‘ತೊಟ್ಟಿಲ ಹಬ್ಬ’ವನ್ನು ಒಂದು ವಾರ ಕಾಲ ಅರ್ಥ­ಪೂರ್ಣವಾಗಿ ಆಚರಿಸಲು ಸರ್ಕಾರ ತೀರ್ಮಾ­ನಿಸಿದೆ. ಈ ಸಾಂಸ್ಕೃತಿಕ ಉತ್ಸವದ ಮೆರುಗು ಹೆಚ್ಚಿಸಲು ಸಂಘ–ಸಂಸ್ಥೆಗಳೂ ಕೈಜೋಡಿ­ಸಿವೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತೆಲಂಗಾಣದ ಎಲ್ಲ ರಾಜಕೀಯ ಪಕ್ಷಗಳೂ ಈ ಉತ್ಸವದಲ್ಲಿ ಪಾಲ್ಗೊಂಡು ರಾಜ್ಯೋದಯ ಹಬ್ಬ­ವನ್ನು ಕಳೆಗಟ್ಟಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿವೆ.

ಇದರ ಭಾಗವಾಗಿ ನಗರದ ಪ್ರಮುಖ ರಸ್ತೆಗಳನ್ನು ಸಿಂಗರಿಸಲಾಗಿದೆ. ತೆಲಂಗಾಣ ಬಾವುಟ, ಫ್ಲೆಕ್ಸ್‌, ಬಂಟಿಂಗ್ಸ್‌, ಕೆಸಿಆರ್‌ ಭಾವಚಿತ್ರ ಇರುವ ಭಾರಿ ಗಾತ್ರದ ಬಲೂನ್‌ಗಳು ರಸ್ತೆಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ರಾರಾಜಿಸುತ್ತಿವೆ. ನಗರ ಗುಲಾಬಿ ಬಣ್ಣಕ್ಕೆ ತಿರುಗಿದೆ. ಟಿಆರ್‌ಎಸ್‌ ಬಾವುಟದ ಬಣ್ಣವೂ ಇದೇ ಆಗಿರುವುದ­ರಿಂದ ನಗರ ಗುಲಾಬಿಮಯ ಆಗಿದೆ.

ಉತ್ಸವ ಕಾರ್ಯಕ್ರಮಗಳು ಭಾನು­ವಾರ ಮಧ್ಯರಾತ್ರಿಯಿಂದಲೇ ಚಾಲನೆ ಪಡೆದಿವೆ. ಜಿಲ್ಲಾ ­ಕೇಂದ್ರ ಹಾಗೂ ಗ್ರಾಮಗಳಲ್ಲಿಯೂ ಜರುಗಲಿವೆ. ಪೊಲೀಸ್‌ ಇಲಾಖೆಯು ಸಿಕಂದರಾ­ಬಾದ್‌ ಪರೇಡ್‌ ಮೈದಾನದಲ್ಲಿ ಸೋಮವಾರ ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ­ಗಳನ್ನು ಆಯೋಜಿಸಿದೆ. ಕೆಸಿಆರ್‌ ಬೆಳಿಗ್ಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪರೇಡ್‌ ಮೈದಾನಕ್ಕೆ ತೆರಳಿ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಲಿದ್ದಾರೆ.

ಭಾವಸಂಭ್ರಮದಲ್ಲಿ ತೇಲುತ್ತಿರುವ ತೆಲಂಗಾಣ ಜನರು ಸೋಮವಾರದ ಸೂರ್ಯೋದಯಕ್ಕಾಗಿ ಉಸಿರು ಬಿಗಿ­ಹಿಡಿದು ಕಾಯುತ್ತಿದ್ದಾರೆ– ‘ತಲೆ ಎತ್ತಿ ಬದುಕುವ’ ಅವಕಾಶ ದೊರೆತದ್ದಕ್ಕೆ ತೆಲಂಗಾಣ ತಾಯಿ ಪರ ಜಯಘೋಷ ಮೊಳಗಿಸಲು.

ಬಿರಿಯಾನಿ ವಿತರಣೆ
ಭಾನುವಾರ ಮಧ್ಯರಾತ್ರಿ ಹೈದರಾಬಾದ್‌ ನಗರದ ಕನಿಷ್ಠ 150 ಸ್ಥಳಗಳಲ್ಲಿ ಬಿರಿಯಾನಿ ಮತ್ತು ಸಿಹಿ ಹಂಚಿ ತೆಲಂಗಾಣ ರಾಜ್ಯದ ಉದಯವನ್ನು ಸಂಭ್ರಮಿಸಲಾಗಿದೆ.

ಟಿಆರ್‌ಎಸ್‌ ಹಿರಿಮೆ
ಆಂಧ್ರದಿಂದ ತೆಲಂಗಾಣವನ್ನು ಬೇರ್ಪಡಿಸಿ, ಸ್ವತಂತ್ರ ರಾಜ್ಯ ಸ್ಥಾನಮಾನ ದೊರಕಿಸಿ­ಕೊಡುವ ಏಕಮಾತ್ರ ಉದ್ದೇಶದಿಂದ ಹುಟ್ಟಿ­ಕೊಂಡ ಟಿಆರ್‌ಎಸ್‌, ಆ ಗುರಿ ಸಾಧಿಸಿದ ಹಿರಿಮೆಯನ್ನೂ ಪಡೆದಿದೆ. ಅಷ್ಟೇ ಅಲ್ಲ, ವಿಧಾನ­ಸಭೆಯಲ್ಲಿ ಸರಳ ಬಹುಮತ ಗಳಿಸಿ, ನವ ತೆಲಂಗಾಣವನ್ನು ಮುನ್ನಡೆಸುವ ಮೊದಲ ಅವಕಾಶವನ್ನೂ ಪಡೆದಿದೆ.

ಮಹಾ ಶುಭದಿನ
ತೆಲಂಗಾಣ ಪ್ರತ್ಯೇಕ ರಾಜ್ಯವಾದ ದಿನವೇ ಮಹಾ ಶುಭದಿನ ಎಂದು ಭಾವಿಸಿ ಕೆಲವರು ಸೋಮವಾರವೇ ಬಾಳ ಸಂಗಾತಿಗಳಾಗಲು, ನಿಶ್ಚಿತಾರ್ಥ ಮಾಡಿಕೊಳ್ಳಲು ತೀರ್ಮಾನಿಸಿ­ದ್ದಾರಂತೆ! ಪ್ರಸವಕ್ಕೂ ಇದೇ ಮುಹೂರ್ತ­ವನ್ನು ನಿಗದಿ­ಪಡಿಸಿದ ಪ್ರಸಂಗಗಳೂ ನಡೆದಿವೆ ಎಂದೂ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT