ADVERTISEMENT

ತೇಜಸ್‌ ಎಕ್ಸ್‌ಪ್ರೆಸ್: ಎಲ್‌ಸಿಡಿ ಪರದೆಗಳನ್ನು ಒಡೆದುಹಾಕಿ ಹೆಡ್‌ಫೋನ್‌ಗಳನ್ನು ಕದ್ದೊಯ್ದ ಪ್ರಯಾಣಿಕರು

ಏಜೆನ್ಸೀಸ್
Published 25 ಮೇ 2017, 9:48 IST
Last Updated 25 ಮೇ 2017, 9:48 IST
ತೇಜಸ್ ಎಕ್ಸ್‌ಪ್ರೆಸ್ (ಸಾಂದರ್ಭಿಕ ಚಿತ್ರ)
ತೇಜಸ್ ಎಕ್ಸ್‌ಪ್ರೆಸ್ (ಸಾಂದರ್ಭಿಕ ಚಿತ್ರ)   

ಮುಂಬೈ: ವಿಮಾನದಲ್ಲಿರುವಂಥ ಸೌಲಭ್ಯಗಳನ್ನು ಹೊಂದಿರುವ ಹೊಸ ಐಷಾರಾಮಿ ‘ತೇಜಸ್ ಎಕ್ಸ್‌ಪ್ರೆಸ್’ ರೈಲು ಗೋವಾಕ್ಕೆ ಮೊದಲ ಪ್ರಯಾಣ ಬೆಳೆಸಿ ಮುಂಬೈಗೆ ವಾಪಸಾದ ವೇಳೆ ಅದರಲ್ಲಿದ್ದ ಎಲ್‌ಸಿಡಿ ಪರದೆಗಳನ್ನು ಪ್ರಯಾಣಿಕರು ಒಡೆದು ಹಾಕಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಜತೆಗೆ, ಅನೇಕ ಹೆಡ್‌ಫೋನ್‌ಗಳನ್ನು ಕದ್ದೊಯ್ದಿರುವುದೂ ಬೆಳಕಿಗೆ ಬಂದಿದೆ.

ಎಲ್‌ಸಿಡಿ ಪರದೆ, ಕಾಫಿ ಯಂತ್ರ, ವೈಫೈ ಸೌಲಭ್ಯ, ಸಿ.ಸಿ.ಟಿ.ವಿ ಕ್ಯಾಮೆರಾ ಮತ್ತಿತರ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ರೈಲು ಮಂಗಳವಾರ ಮುಂಬೈಗೆ ವಾಪಸಾಗಿತ್ತು. 9 ಗಂಟೆಗೂ ಕಡಿಮೆ ಅವಧಿಯಲ್ಲಿ 630 ಕಿ.ಮೀ. ದೂರದ ಪ್ರಯಾಣ ಪೂರೈಸಿತ್ತು. ರೈಲಿನಲ್ಲಿರುವ ಉಪಕರಣಗಳನ್ನು ತಮ್ಮದೇ ವಸ್ತುಗಳಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳು ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದರೂ ಕೆಲವು ಪ್ರಯಾಣಿಕರು ದುರ್ವರ್ತನೆ ಪ್ರದರ್ಶಿಸಿದ್ದಾರೆ. ರೈಲಿನಲ್ಲಿರುವ ಶೌಚಾಲಯಗಳನ್ನೂ ಗಲೀಜು ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಉಲ್ಲೇಖಿಸಿ ದಿ ಏಷ್ಯನ್‌ ಏಜ್ ವೆಬ್‌ಸೈಟ್ ವರದಿ ಮಾಡಿದೆ.

‘ಕೆಲವು ಪ್ರಯಾಣಿಕರು ಎಲ್‌ಸಿಡಿ ಪರದೆಗಳನ್ನು ಕಿತ್ತುಹಾಕಲು ಪ್ರಯತ್ನಿಸಿದರು. ಸ್ವಲ್ಪ ಹೊತ್ತಿನ ಬಳಿಕ ಅಧಿಕಾರಿಗಳು ಬಂದು ಕಣ್ಗಾವಲು ಹೆಚ್ಚಿಸಿದರು’ ಎಂದು ಆದಿತ್ಯ ತೆಂಬೆ ಎಂಬ ಪ್ರಯಾಣಿಕ ತಿಳಿಸಿದ್ದಾರೆ.

ADVERTISEMENT

‘ಪ್ರತಿಯೊಂದು ಬೋಗಿಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅದರ ಸಹಾಯದಿಂದ ತಪ್ಪಿತಸ್ಥರನ್ನು ಪತ್ತೆಹಚ್ಚಲಿದ್ದೇವೆ’ ಎಂದು ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಸಚಿನ್ ಭಲೋಡ್ ತಿಳಿಸಿದ್ದಾರೆ.

‘ಅತಿ ವೇಗ ಚಲಿಸುವ, ಐಷಾರಾಮಿ ರೈಲು ನಮ್ಮ ಹೆಮ್ಮೆ. ಅದಕ್ಕೆ ಹಾನಿ ಮಾಡುವ ಕೃತ್ಯ ಎಸಗಿದಲ್ಲಿ ಮತ್ತೆ ಅಂಥ ರೈಲುಗಳನ್ನು ಆರಂಭಿಸಲು ಇಲಾಖೆ ಸಾಕಷ್ಟು ಯೋಚನೆ ಮಾಡುವುದು ಖಂಡಿತ’ ಎಂದು ರೈಲಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಭಾಗಿಯಾಗಿದ್ದ ರೈಲ್ವೆ ಚಳವಳಿಗಾರ ನಿರ್ಮಲ್ ಟಿಕ್‌ಮಾಗಡ್ ಹೇಳಿದ್ದರು.

ಮೊದಲ ಪ್ರಯಾಣ ಆರಂಭಿಸುವುದಕ್ಕೂ ಮುನ್ನ ಇತ್ತೀಚೆಗೆ ತೇಜಸ್ ಎಕ್ಸ್‌ಪ್ರೆಸ್‌ಗೆ ದುಷ್ಕರ್ಮಿಗಳು ಕಲ್ಲೆಸೆದು, ಕಿಟಿಕಿ ಗಾಜನ್ನು ಪುಡಿ ಮಾಡಿದ್ದರು.

[Related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.