ADVERTISEMENT

ತ್ರಿವಳಿ ತಲಾಖ್‌ಗೆ ‘ತಲಾಖ್‌’

ಐವರು ನ್ಯಾಯಮೂರ್ತಿಗಳ ಸಂವಿಧಾನದ ಪೀಠದಿಂದ ಬಹುಮತದ ತೀರ್ಪು

ಪಿಟಿಐ
Published 22 ಆಗಸ್ಟ್ 2017, 20:29 IST
Last Updated 22 ಆಗಸ್ಟ್ 2017, 20:29 IST
ತ್ರಿವಳಿ ತಲಾಖ್‌ಗೆ ‘ತಲಾಖ್‌’
ತ್ರಿವಳಿ ತಲಾಖ್‌ಗೆ ‘ತಲಾಖ್‌’   

ನವದೆಹಲಿ: ಸುನ್ನಿ ಮುಸ್ಲಿಂ ಸಮುದಾಯದಲ್ಲಿ 1,400 ವರ್ಷಗಳಿಂದಲೂ ಜಾರಿಯಲ್ಲಿದ್ದ ಒಮ್ಮೆಗೆ ಮೂರು ಬಾರಿ ‘ತಲಾಖ್‌’ ಎಂದು ಹೇಳಿ ಹೆಂಡತಿಗೆ ವಿಚ್ಛೇದನ ನೀಡುವ ವಿವಾದಾತ್ಮಕ ಪದ್ಧತಿಯನ್ನು ರದ್ದುಪಡಿಸುವ ಚಾರಿತ್ರಿಕ ತೀರ್ಪುನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನೀಡಿದೆ.

ಮುಸ್ಲಿಮರ ಧರ್ಮ ಗ್ರಂಥ ಕುರ್‌ಆನ್‌ನ ತತ್ತ್ವಗಳು ಮತ್ತು ಇಸ್ಲಾಂ ಷರಿಯತ್‌ನ ಕಾನೂನನ್ನು ಈ ಪದ್ಧತಿ ಉಲ್ಲಂಘಿಸುತ್ತದೆ ಎಂಬ ಕಾರಣದಿಂದ ಪೀಠವು ಈ ನಿರ್ಧಾರಕ್ಕೆ ಬಂದಿದೆ.

ಐವರು ನ್ಯಾಯಮೂರ್ತಿಗಳ ಪೀಠವು 3:2ರ ಬಹುಮತದ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರು ತ್ರಿವಳಿ ತಲಾಖ್ ಪದ್ಧತಿ ಅಸಾಂವಿಧಾನಿಕ ಎಂದು ಘೋಷಿಸಲು ವಿರೋಧ ವ್ಯಕ್ತಪಡಿಸಿದ್ದರು. ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ಅವರೂ ಖೇಹರ್‌ ಜತೆಗೆ ದನಿಗೂಡಿಸಿದ್ದರು. ಹೀಗಾಗಿ ಖೇಹರ್‌ ಅವರು ಒಂದೇ ಸಾಲಿನ ಆದೇಶದ ಮೂಲಕ ತ್ರಿವಳಿ ತಲಾಖ್‌ ಪದ್ಧತಿಯನ್ನು 3:2 ಬಹುಮತದಲ್ಲಿ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಪ್ರಕಟಿಸಿದರು.

ADVERTISEMENT

ಪೀಠವು 395 ಪುಟಗಳ ಮೂರು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ. ಬಹುಮತದ ತೀರ್ಪನ್ನು ನ್ಯಾಯಮೂರ್ತಿಗಳಾದ ಕುರಿಯನ್‌ ಜೋಸೆಫ್‌, ಯು.ಯು. ಲಲಿತ್‌ ಮತ್ತು ರೋಹಿಂಗ್ಟನ್‌ ಎಫ್‌. ನಾರಿಮನ್‌ ಅವರು ಬರೆದಿದ್ದಾರೆ. ತ್ರಿವಳಿ ತಲಾಖ್‌ ಮುಸಲ್ಮಾನ ಧರ್ಮ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನಿನ ಭಾಗವಾಗಿರುವುದರಿಂದ ಅದನ್ನು ನ್ಯಾಯಾಂಗದ ಮೂಲಕ ರದ್ದು ಮಾಡುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದ ಮುಖ್ಯ ನ್ಯಾಯಮೂರ್ತಿ ಖೇಹರ್‌ ಮತ್ತು ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ಅವರದ್ದು ಅಲ್ಪಮತದ ತೀರ್ಪಾಗಿ ದಾಖಲಾಯಿತು. ಈ ವಿಚಾರದಲ್ಲಿ ಸಂಸತ್ತು ಕಾನೂನು ಮಾಡುವುದೇ ಉಚಿತ ಎಂಬ ಅಭಿಪ್ರಾಯಕ್ಕೆ ಅವರಿಬ್ಬರು ಬಂದಿದ್ದಾರೆ.

ಸಂವಿಧಾನ ಪೀಠದ ತೀರ್ಪಿಗೆ ದೇಶದಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಮತ್ತು ಕಾನೂನು ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಲಿಂಗಸಮಾನತೆಯ ಹೋರಾಟಕ್ಕೆ ಸಿಕ್ಕ ದೊಡ್ಡ ಗೆಲುವು’ ಮತ್ತು ‘ಮಹಿಳಾ ಸಬಲೀಕರಣದತ್ತ ಬಹುದೊಡ್ಡ ಹೆಜ್ಜೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ತ್ರಿವಳಿ ತಲಾಖ್‌ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್‌ ಮುಂದೆ ಪ್ರತಿಪಾದಿಸಿದ್ದ ಹಿರಿಯ ವಕೀಲಯ ಮುಕುಲ್‌ ರೋಹಟಗಿ, ‘ಏಕರೂಪ ನಾಗರಿಕ ಸಂಹಿತೆಯ ಅಂತಿಮ ಗುರಿಯತ್ತ ಸಾಗಲು ಇದೊಂದು ಪ್ರಮುಖ ಹೆಜ್ಜೆ’ ಎಂದು ಹೇಳಿದ್ದಾರೆ. ಈ ತೀರ್ಪು ಸರ್ಕಾರದ ನಿಲುವನ್ನು ದೃಢಪಡಿಸಿದೆ. ಮುಸ್ಲಿಂ ಮಹಿಳೆಯರ ಘನತೆಯನ್ನು ಎತ್ತಿ ಹಿಡಿದಿರುವುದಲ್ಲದೆ, ಇತರರಂತೆ ಅವರೂ ಪ್ರಗತಿ ಹೊಂದುವ ಅವಕಾಶ ಕೊಟ್ಟಿದೆ ಎಂದು ಮುಕುಲ್‌ ರೋಹಟಗಿ ಹೇಳಿದ್ದಾರೆ.

**

ತೀರ್ಪಿನ ಪರಿಣಾಮ: ಒಮ್ಮೆಗೆ ಮೂರು ಬಾರಿ ತಲಾಖ್‌ ಎಂದು ಹೇಳಿ ವಿಚ್ಛೇದನ ನೀಡುವ ಪದ್ದತಿ ರದ್ದಾಗಲಿದೆ. ಇ–ಮೇಲ್‌, ವಾಟ್ಸ್‌ಆ್ಯಪ್‌ ಸಂದೇಶ, ಪತ್ರಗಳ ಮೂಲಕವೂ ವಿಚ್ಛೇದನ ನೀಡಲಾಗುತ್ತಿತ್ತು. ಅದಕ್ಕೆ ಇನ್ನು ಮುಂದೆ ಅವಕಾಶ ಇಲ್ಲ.

ಮೂರು ತಿಂಗಳು ಹೆಂಡತಿಯಿಂದ ದೂರ ಇದ್ದು ನಂತರ ಒಂದೇ ಬಾರಿ ವಿಚ್ಛೇದನ ನೀಡುವ ತಲಾಖ್‌–ಎ–ಅಹ್ಸಾನ್‌ ಎಂಬ ಪದ್ಧತಿ ಮುಂದುವರಿಯಲಿದೆ. ಹಾಗೆಯೇ ಹೆಂಡತಿಯಿಂದ ದೂರ ಇದ್ದು ನಿಗದಿತ ಅಂತರದಲ್ಲಿ ಮೂರು ಬಾರಿ ತಲಾಖ್‌ ಎಂದು ಹೇಳಿ ನೀಡುವ ವಿಚ್ಛೇದನ ಪದ್ಧತಿಯೂ ಜಾರಿಯಲ್ಲಿ ಇರಲಿದೆ.

ಸುಪ್ರೀಂ ಕೋರ್ಟ್‌ನ ತೀರ್ಪಿಗೆ ದೇಶದಾದ್ಯಂತ ಸ್ವಾಗತ ವ್ಯಕ್ತವಾಗಿದೆ. ರಾಜಕೀಯ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಕಾನೂನು ತಜ್ಞರು ತೀರ್ಪನ್ನು ಶ್ಲಾಘಿಸಿದ್ಧಾರೆ. ಇದು ಲಿಂಗ ಸಮಾನತೆಯ ಗೆಲುವು ಎಂದು ಕೆಲವು ಹೇಳಿದ್ದರೆ ಮತ್ತೆ ಕೆಲವರು ಮಹಿಳೆಯರ ಪ್ರಗತಿಯ ಮಹತ್ವದ ಮೈಲುಗಲ್ಲು ಎಂದು ಬಣ್ಣಿಸಿದ್ದಾರೆ.


ಸುಪ್ರೀಂ ಕೋರ್ಟ್‌ ತೀರ್ಪನ್ನು ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲು ಕೇಂದ್ರ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.