ADVERTISEMENT

ದನದ ಮಾಂಸ ಪೂರೈಕೆ: ವಿವಾದ ಸೃಷ್ಟಿಸಿದ ಬಿಜೆಪಿ ಅಭ್ಯರ್ಥಿ ಹೇಳಿಕೆ

ಪಿಟಿಐ
Published 3 ಏಪ್ರಿಲ್ 2017, 19:30 IST
Last Updated 3 ಏಪ್ರಿಲ್ 2017, 19:30 IST
ಶ್ರೀಪ್ರಕಾಶ್‌
ಶ್ರೀಪ್ರಕಾಶ್‌   

ತಿರುವನಂತಪುರ: ಮಲಪ್ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜಿಲ್ಲೆಯಲ್ಲಿ ‘ಗುಣಮಟ್ಟದ ದನದ ಮಾಂಸ’ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದ್ದ ಬಿಜೆಪಿ ಅಭ್ಯರ್ಥಿ ಶ್ರೀಪ್ರಕಾಶ್‌ ಸೋಮವಾರ ಸ್ಪಷ್ಟೀಕರಣ ನೀಡಿದ್ದಾರೆ.

ತಾವು ಗೋಹತ್ಯೆ ವಿರೋಧಿ ಮತ್ತು ಈ ವಿಚಾರಕ್ಕೆ ಸಂಬಂಧಿಸಿ ಪಕ್ಷದ ರಾಷ್ಟ್ರೀಯ ನೀತಿಗೆ ಬದ್ಧ ಎಂದು ಅವರು ಹೇಳಿದ್ದಾರೆ. ಆದರೆ, ದನದ ಮಾಂಸಕ್ಕೆ ಸಂಬಂಧಿಸಿ ನೀಡಿದ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕ ಶ್ರೀಪ್ರಕಾಶ್‌ ಅವರಿಂದ ವಿವರಣೆ ಕೇಳುವ ಸಾಧ್ಯತೆ ಇದೆ.

ಜನರಿಗೆ ಉತ್ತಮ ಗುಣಮಟ್ಟದ ಮಾಂಸ ದೊರೆಯುವಂತೆ ಮಾಡಲು ಎಲ್ಲ ಕಸಾಯಿಖಾನೆಗಳನ್ನು ಹವಾನಿಯಂತ್ರಿತ ಮಾಡಲಾಗುವುದು ಎಂದೂ ಶ್ರೀಪ್ರಕಾಶ್‌ ಹೇಳಿದ್ದರು.

‘ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಉತ್ತರ ಪ್ರದೇಶದಲ್ಲಿ ಅಕ್ರಮವಾದ ಕಸಾಯಿಖಾನೆಗಳನ್ನು ಮಾತ್ರ ಮುಚ್ಚಲಾಗಿದೆ. ಜನರಿಗೆ ಉತ್ತಮ ಗುಣಮಟ್ಟದ ಆಹಾರ ದೊರೆಯುವಂತೆ ಮಾಡಬೇಕು ಎಂಬುದು ಮಾತ್ರ ನನ್ನ ಹೇಳಿಕೆಯ ಅರ್ಥ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ದನದ ಮಾಂಸವನ್ನು ನಿಷೇಧಿಸುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದೂ ಅವರು ಹೇಳಿದ್ದಾರೆ. ಶ್ರೀಪ್ರಕಾಶ್‌ ಅವರ ಹೇಳಿಕೆಯಿಂದ ರಾಜ್ಯ ಬಿಜೆಪಿ ಘಟಕ ಅಂತರ ಕಾಯ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.