ADVERTISEMENT

ದನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ರೈಲು ಹಳಿಗೆಸೆದ ಗೋರಕ್ಷಕರು

ಏಜೆನ್ಸೀಸ್
Published 12 ನವೆಂಬರ್ 2017, 12:47 IST
Last Updated 12 ನವೆಂಬರ್ 2017, 12:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಲ್ವಾರ್: ದನಗಳನ್ನು ಸಾಗಿಸುತ್ತಿದ್ದ ಮಸ್ಲಿಮರ ಮೇಲೆ ಗೋರಕ್ಷಕರು ಎಂದು ಹೇಳಿಕೊಂಡವರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟ ಘಟನೆ ರಾಜಸ್ಥಾನ–ಹರಿಯಾಣ ಗಡಿ ಪ್ರದೇಶದಲ್ಲಿ ನಡೆದಿದೆ. ಇಬ್ಬರು ಗಾಯಗೊಂಡಿದ್ದಾರೆ.

ಗುಂಡೇಟಿಗೆ ಬಲಿಯಾದ ವ್ಯಕ್ತಿಯನ್ನು ಉಮ್ಮರ್ ಮುಹಮ್ಮದ್ ಎಂದು ಗುರುತಿಸಲಾಗಿದೆ ಎಂದು ನ್ಯೂಸ್‌18 ವರದಿ ಮಾಡಿದೆ.

ನವೆಂಬರ್‌ 10ರಂದು ಉಮ್ಮರ್ ಮತ್ತು ಇತರ ಇಬ್ಬರು ಹರಿಯಾಣದ ಮೇವಾತ್‌ನಿಂದ ರಾಜಸ್ಥಾನದ ಭಾರತ್‌ಪುರಕ್ಕೆ ದನಗಳನ್ನು ಕೊಂಡೊಯ್ಯುತ್ತಿದ್ದರು. ಈ ವೇಳೆ ದಾಳಿ ನಡೆಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್‌18 ವರದಿ ಮಾಡಿದೆ.

ADVERTISEMENT

ದಾಳಿಕೋರರು ನಂತರ ಮೃತದೇಹವನ್ನು ರೈಲು ಹಳಿಗೆ ಎಸೆದು ಅಪಘಾತದಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಅಲ್ವಾರ್‌ನ ಮೆಯೊ ಪಂಚಾಯತ್‌ನ ಅಧ್ಯಕ್ಷ ಶೆರ್ ಮುಹಮ್ಮದ್ ಆರೋಪಿಸಿದ್ದಾರೆ.

ಈ ಮಧ್ಯೆ, ಉಮ್ಮರ್ ಗುಂಡೇಟಿನಿಂದಲೇ ಮೃತಪಟ್ಟಿದ್ದಾರೆ ಎಂಬುದನ್ನು ಅಧಿಕೃತ ಮೂಲಗಳು ದೃಢಪಡಿಸಿವೆ ಎಂಬುದನ್ನೂ ವರದಿ ಉಲ್ಲೇಖಿಸಿದೆ. ಉಮ್ಮರ್ ಜತೆಗಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪಾರಾಗಿದ್ದಾರೆ. ಈ ಪೈಕಿ ಒಬ್ಬರಾದ ತಾಹಿರ್ ಮುಹಮ್ಮದ್ ಎಂಬುವವರು ತಾವಾಗಿಯೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಫ್‌ಐಆರ್‌ ದಾಖಲಿಸಲು ಮನವಿ: ಘಟನೆ ಬಗ್ಗೆ ಮೃತ ಉಮ್ಮರ್ ಅವರ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಜತೆಗೆ, ಎಫ್‌ಐಆರ್ ದಾಖಲಿಸುವಂತೆಯೂ ಮನವಿ ಮಾಡಿದ್ದಾರೆ. ಉಮ್ಮರ್ ಹಾಗೂ ಜತೆಗಿದ್ದವರು ಹೈನುಗಾರಿಕೆ ಉದ್ದೇಶಕ್ಕೆ ದನಗಳನ್ನು ಸಾಗಿಸುತ್ತಿದ್ದರೇ ವಿನಾ ಕೊಲ್ಲುವುದಕ್ಕಾಗಿ ಅಲ್ಲ. ಈ ವೇಳೆ ವಾಹನವೊಂದರಲ್ಲಿ ಬಂದ 7–8 ಜನರ ಗುಂಪು ಅವರನ್ನು ಅಡ್ಡಗಟ್ಟಿದೆ. ಈ ಪೈಕಿ ರಾಕೇಶ್ ಎಂದು ಹೇಳಿಕೊಂಡ ಒಬ್ಬ ವ್ಯಕ್ತಿ ತಮ್ಮದು ‘ಗೋರಕ್ಷಕರ ತಂಡ’ ಎಂದು ಹೇಳಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.