ADVERTISEMENT

ದಾದಿಯರು ತಾಯ್ನಾಡಿಗೆ

ಇರಾಕ್‌: ಸುನ್ನಿ ಉಗ್ರರ ವಶದಲ್ಲಿದ್ದವರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2014, 19:30 IST
Last Updated 4 ಜುಲೈ 2014, 19:30 IST

ನವದೆಹಲಿ/ಕೊಚ್ಚಿ (ಪಿಟಿಐ): ಸುನ್ನಿ ಉಗ್ರರ ವಶದಲ್ಲಿದ್ದು ಬೆದರಿಕೆ­ಯಡಿಯೇ ಇರಾಕ್‌ನ ಟಿಕ್ರಿತ್‌ ಆಸ್ಪತ್ರೆಯಿಂದ ಗುರುವಾರ ಮೋಸುಲ್‌ ತಲುಪಿದ್ದ ಕೇರಳದ ಎಲ್ಲಾ 46 ದಾದಿಯರು ಶುಕ್ರವಾರ ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾರೆ.   ಇವರೆಲ್ಲರೂ ಏರ್‌ ಇಂಡಿಯಾ ವಿಶೇಷ ವಿಮಾನದಲ್ಲಿ ಶನಿವಾರ ಕೊಚ್ಚಿ ತಲುಪಲಿದ್ದಾರೆ.

 ‘ಟಿಕ್ರಿತ್‌ನ ಆಸ್ಪತ್ರೆಯ ನೆಲ­ಮಹಡಿ­ಯಲ್ಲಿ ಸಿಲುಕಿದ್ದ ಈ ದಾದಿಯರನ್ನು  ಉಗ್ರರು ಗುರುವಾರ   ಬೆದರಿಕೆ ಹಾಕಿ ಅಲ್ಲಿಂದ ತೆರವು­ಗೊಳಿಸಿ ಮೋಸುಲ್‌್ ಪಟ್ಟಣದ ಹಳೆಯ ಕಟ್ಟಡವೊಂದರಲ್ಲಿ ಇರಿಸಿದ್ದರು. ದಾದಿ­ಯರು ಈಗ ಸುರಕ್ಷಿತ­ವಾಗಿದ್ದು, ಎಬ್ರಿಲ್‌ನಲ್ಲಿ­ರುವ ಭಾರತದ ರಾಯಭಾರ ಕಚೇರಿ ಅಧಿಕಾರಿ ಗಳ ಸಂಪರ್ಕದ­ಲ್ಲಿದ್ದಾರೆ’ ಎಂದು ವಿದೇಶಾಂಗ ಸಚಿವಾ­ಲಯದ ವಕ್ತಾರರು ಸುದ್ದಿಗಾರರಿಗೆ ತಿಳಿಸಿದರು.
ಶನಿವಾರ ಬೆಳಿಗ್ಗೆ ಇವರೆಲ್ಲಾ ಕೊಚ್ಚಿ ತಲುಪುವ ನಿರೀಕ್ಷೆ ಇದೆ ಎಂದೂ ಅವರು ಹೇಳಿದ್ದಾರೆ.

ದಾದಿಯರನ್ನು ಕರೆದುಕೊಂಡು ಬರುವುದಕ್ಕೆ ಏರ್‌ ಇಂಡಿಯಾ ವಿಶೇಷ ವಿಮಾನ ಎಬ್ರಿಲ್‌ಗೆ  ತೆರಳಿದೆ.  ದೆಹಲಿ ಹಾಗೂ ಕೇರಳದಲ್ಲಿ ನಡೆದ ಪ್ರತ್ಯೇಕ ಸುದ್ದಿ­ಗೋಷ್ಠಿಗಳಲ್ಲಿ ಮಾತ­ನಾಡಿದ ಕೇರಳ ಮುಖ್ಯಮಂತ್ರಿ ಉಮ್ಮನ್‌್ ಚಾಂಡಿ, ‘ದಾದಿಯರು ಎಬ್ರಿಲ್‌ನಲ್ಲಿ­ರುವ ಅಂತರರಾಷ್ಟ್ರೀಯ ವಿಮಾನ­ನಿಲ್ದಾಣ  ಸಮೀಪಿಸಿ­ದ್ದಾರೆ. ಇವರ ರಕ್ಷಣೆಗೆ ಕೇಂದ್ರ ಸರ್ಕಾರ, ಕೇರಳ ಸರ್ಕಾರ ಹಾಗೂ ಬಾಗ್ದಾದ್‌ನಲ್ಲಿರುವ ರಾಯಭಾರ ಕಚೇರಿ ಮಾಡಿದ ಪ್ರಯತ್ನ ಫಲಕೊಟ್ಟಿದೆ’ ಎಂದರು.

ವಿಶೇಷ ವಿಮಾನದಲ್ಲಿ ದಾದಿಯರು ಶನಿವಾರ ಬೆಳಿಗ್ಗೆ 6.40ಕ್ಕೆ ಕೊಚ್ಚಿ ತಲುಪುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿರುವ ಕೇರಳದ  ಸ್ಥಾನಿಕ ಆಯುಕ್ತ ಜ್ಞಾನೇಶ್‌್ ಕುಮಾರ್‌ ಮತ್ತು ಹೆಚ್ಚುವರಿ ಸ್ಥಾನಿಕ ಆಯುಕ್ತೆ   ರಚನಾ ಷಾ ಅವರು ವಿಶೇಷ ವಿಮಾನ­ದಲ್ಲಿ ಎಬ್ರಿಲ್‌ಗೆ ತೆರಳಿದ್ದಾರೆ.

‘ವಿಮಾನವು ಎಲ್ಲೂ ನಿಲ್ಲದೇ ನೇರ ಕೊಚ್ಚಿಗೆ ಬರಲಿದೆ. ಈ ವಿಮಾನದಲ್ಲಿ ಬೇರೆ ರಾಜ್ಯದವರು ಕೂಡ ಬರುತ್ತಿ­ದ್ದಾರೆ. ಆದರೆ ವಿಮಾನ ಮೊದಲು ಕೊಚ್ಚಿಗೆ ಬಂದು ನಂತರ ದೆಹಲಿಗೆ ತೆರಳುತ್ತದೆ’ ಎಂದು ಚಾಂಡಿ ವಿವರಿಸಿದರು.

ದಾರಿತಪ್ಪಿದ ಬಸ್‌: ‘ಉಗ್ರರ ವಶದಿಂದ ಬಿಡುಗಡೆ­ಗೊಂಡ ದಾದಿಯರು ಸಂವ­ಹನ ಕೊರತೆಯಿಂದಾಗಿ ಎಬ್ರಿಲ್ ವಿಮಾನ ನಿಲ್ದಾಣ ತಲುಪುವುದಕ್ಕೆ ತಡ­ವಾಯಿತು. ಮೋಸುಲ್‌್ ಪಟ್ಟಣದಿಂದ ದಾದಿಯರನ್ನು ಕರೆದುಕೊಂಡು ಬರ­ಲೆಂದು ಹೊರಟಿದ್ದ ಬಸ್‌್ ದಾರಿ ತಪ್ಪಿ ಬೇರೆ ಕಡೆ ಹೋಗಿತ್ತು. ಹೀಗಾಗಿ ಅದು ನಿಗದಿತ ಸ್ಥಳ ತಲುಪುವುದು ತಡವಾ­ಯಿತು’ ಎಂದು ಚಾಂಡಿ ಹೇಳಿದರು.

ಎಬ್ರಿಲ್‌ ತಲುಪಿದ್ದೇ ತಡ ದಾದಿಯರು ತಮ್ಮ ಮನೆಗಳಿಗೆ ಕರೆ ಮಾಡಿ  ಪ್ರಯಾಣದ ವಿವರ ನೀಡಿದರು. ಚಾಂಡಿ ಅವರು ಬುಧವಾರ ರಾತ್ರಿ ದೆಹಲಿಗೆ ತೆರಳಿ, ದಾದಿಯರ ಬಿಡುಗಡೆ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೊಂದಿಗೆ ಸಮಾಲೋ­ಚನೆ ನಡೆಸಿದ್ದರು. ಇದಕ್ಕಾಗಿ  ಅವರು ಎರಡು ದಿನ ರಾಜಧಾನಿಯಲ್ಲಿಯೇ ಮೊಕ್ಕಾಂ ಹೂಡಿದ್ದರು.

ಏಸು ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದೆ...
ತಿರುವನಂತಪುರ (ಐಎಎನ್‌ಎಸ್‌): ‘ಶಸ್ತ್ರಧಾರಿ ಉಗ್ರರು ನಮ್ಮನ್ನು ಬಲ­ವಂತವಾಗಿ ಬಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ನನ್ನ ಮಗಳು ಗುರುವಾರ ರಾತ್ರಿ ದೂರವಾಣಿ ಕರೆ ಮಾಡಿ ತಿಳಿಸಿದಾಗ ತೀವ್ರ ಆತಂಕಗೊಂಡಿದ್ದೆ. ಆಗ ದೇವರ ಮೇಲಿನ ನಂಬಿಕೆಯನ್ನೇ ಕಳೆದು­ಕೊಂಡಿದ್ದೆ.

‘ನಿನ್ನೆ, ಉಗ್ರರು ಬೆದರಿಕೆ ಹಾಕಿ ಬಸ್‌ ಹತ್ತಿಸಿ­ದ್ದಾರೆಂಬ ಸುದ್ದಿ ಬಂದಾಗ ಏಸುವಿನ ಮೇಲಿನ ನನ್ನ ನಂಬಿಕೆಯೇ ಹೊರಟುಹೋಗಿತ್ತು. ಆದರೆ ಇವತ್ತು ಬಿಡುಗಡೆ ಮಾಡಿರುವ ಸುದ್ದಿ­ಬಂದಾಗ, ದೇವರ ಮೇಲಿನ ನಂಬಿಕೆಯನ್ನು ಕಳೆದು­ಕೊಂಡಿದ್ದಕ್ಕಾಗಿ ಪಾಪಪ್ರಜ್ಞೆ ನನ್ನನ್ನು ಕಾಡಿತು’ ಎನ್ನುತ್ತಾರೆ ನರ್ಸ್‌ ಮೆರೆನಾ ತಂದೆ ಜೋಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT