ADVERTISEMENT

ದಾದ್ರಿ ಪ್ರಕರಣ ಪೂರ್ವ ನಿಯೋಜಿತ ಸಂಚು

ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಆರೋಪ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 20:06 IST
Last Updated 8 ಅಕ್ಟೋಬರ್ 2015, 20:06 IST

ಲಖನೌ (ಪಿಟಿಐ):  ದಾದ್ರಿ ಘಟನೆಗೆ ಸಂಬಂಧಿಸಿ ತಮ್ಮ ಮೌನ ಮುರಿದಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌,   ‘ಸರ್ಕಾರವನ್ನು ಬಲಿಕೊಡಬೇಕಾದ ಸಂದರ್ಭ ಬಂದರೂ ಚಿಂತೆ ಇಲ್ಲ, ಈ ವಿಷಯವಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ನನಗೆ ಬಂದ ಮಾಹಿತಿ ಪ್ರಕಾರ ಈ ಘಟನೆಯು ನಿರ್ದಿಷ್ಟ ಪಕ್ಷದ ಮೂವರು  ವ್ಯಕ್ತಿಗಳು ನಡೆಸಿದ  ಪೂರ್ವಯೋಜಿತ ಸಂಚು. ಇವರ ಹೆಸರು ನಿಮಗೆ ಗೊತ್ತಾಗಲಿದೆ. 2013ರಲ್ಲಿ ನಡೆದ ಮುಝಫ್ಫರ್‌ನಗರ ಗಲಭೆಯಲ್ಲಿಯೂ ಇವರ ಪಾತ್ರ ಇತ್ತು’ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ ನಾನು ಪಕ್ಷದ  ಸದಸ್ಯರೊಂದಿಗೆ ಈ ಸಂಬಂಧ ಮಾತನಾಡಿದ್ದೇನೆ. ಅವರೂ ಇದೇ ಮಾತು ಹೇಳಿದ್ದಾರೆ. ಪಕ್ಷದ ನಿಯೋಗ ದಾದ್ರಿಗೆ ತೆರಳಲಿದೆ.  ಆಗ ಈ ಮೂರು ವ್ಯಕ್ತಿಗಳು ಯಾರು ಎನ್ನುವುದು  ಗೊತ್ತಾಗಲಿದೆ. ಇವರ ವಿರುದ್ಧ ನಾವು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ಇದಕ್ಕಾಗಿ ಸರ್ಕಾರ ಏನೇ ತ್ಯಾಗ ಮಾಡಲೂ ಸಿದ್ಧ. ನಾವು ಕೋಮುಶಕ್ತಿಗಳನ್ನು ಸದೆಬಡಿಯುತ್ತೇವೆ’ ಎಂದರು.

‘ನಿರ್ದಿಷ್ಟ ಸಮುದಾಯದ ಜನರನ್ನು ದಮನಿಸುವುದಕ್ಕೆ ಮಾಡಿದ ಪಿತೂರಿ ಇದು. ಇದು ಯಶಸ್ವಿಯಾಗುವುದಕ್ಕೆ ನಾವು ಬಿಡುವುದಿಲ್ಲ. ಎಸ್‌ಪಿ ಸರ್ಕಾರದ  ಅಭಿವೃದ್ಧಿ ಕೆಲಸಗಳನ್ನು ಸಹಿಸದೇ  ಅದರ ವಿರುದ್ಧ ಕೋಮುಶಕ್ತಿಗಳು ಪಿತೂರಿ ಮಾಡುತ್ತಿವೆ’ ಎಂದರು.

ಎಚ್ಚರಿಕೆಯ ಗಂಟೆ:  ವೈಯಕ್ತಿಕ ಅಪರಾಧಗಳಿಗೆ ಕೋಮು ಬಣ್ಣ ಬಳಿಯುವ ಪ್ರವೃತ್ತಿ ಪಶ್ಚಿಮ ಉತ್ತರಪ್ರದೇಶ ಭಾಗದಲ್ಲಿ ಹೆಚ್ಚಾಗಿದೆ. ಆದರೂ ದಾದ್ರಿ ಘಟನೆಯು ಎಚ್ಚರಿಕೆ ಗಂಟೆಯಾಗಿದೆ ಎಂದು ಗೌತಮ ಬುದ್ಧ ನಗರ ಜಿಲ್ಲಾಧಿಕಾರಿ ಎನ್‌.ಪಿ.ಸಿಂಗ್‌ ಹೇಳಿದ್ದಾರೆ.

ವರದಿ ಬಂದಿಲ್ಲ:  ದಾದ್ರಿ ಘಟನೆ ಕುರಿತಂತೆ ರಾಷ್‌್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಸ್ಥಳೀಯ ಆಡಳಿತದಿಂದ ಈವರೆಗೆ ವರದಿ ಬಂದಿಲ್ಲ.

ಊರು ಬಿಡೆವು: ‘ನಾವು ಊರು ಬಿಡುವುದಿಲ್ಲ. ಈ ಮೊದಲಿನಂತೆಯೇ ಇಲ್ಲಿಯೇ ಬದುಕಲು ಇಷ್ಟಪಡುತ್ತೇವೆ’ ಎನ್ನುತ್ತಾರೆ ಇಖ್ಲಾಕ್‌ ಅವರ ಅಣ್ಣ ಜಮೀಲ್‌. ಸದಸ್ಯಕ್ಕೆ ಬಿಸಾಡಾ ಬಿಡುವ ಯಾವುದೇ ಯೋಚನೆ ಇಲ್ಲ. ಅಗತ್ಯ ಬಿದ್ದರೆ  2ರಿಂದ 4 ತಿಂಗಳು ಬೇರೆ ಕಡೆ ಇರಬಹುದು ಎಂದು ಅವರು ಹೇಳುತ್ತಾರೆ.ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಿದ ಕಾರಣಕ್ಕೆ ಇಬ್ಬರನ್ನು ಬಂಧಿಸಲಾಗಿದೆ.

ಗೋಮಾಂಸ ಮೇಳಕ್ಕೆ ಬೆಂಬಲಿಸಲು ನಕಾರ: ಅಲಪ್ಪುಳ ವರದಿ: ಕೇರಳದ ವಿವಿಧ ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದ ‘ಗೋಮಾಂಸ ಮೇಳ’ ಬೆಂಬಲಿಸಲು ನಿರಾಕರಿಸಿದ ಸಾಮಾಜಿಕ ಕಾರ್ಯಕರ್ತ ಹಾಗೂ ಲೇಖಕ ರಾಹುಲ್‌ ಈಶ್ವರ್‌ ಅವರ ಕಾರನ್ನು ವಿದ್ಯಾರ್ಥಿಗಳು ತಡೆದು ಜಖಂಗೊಳಿಸಿದ  ಘಟನೆ  ನಡೆದಿದೆ.

‘ಕೇಂದ್ರ ಹೊಣೆಯಲ್ಲ’
ನವದೆಹಲಿ (ಪಿಟಿಐ):
ಸ್ಥಳೀಯ ವಿದ್ಯಮಾನಗಳಿಗೆ ಕೇಂದ್ರವನ್ನು ದೂಷಿಸುವುದಕ್ಕೆ ಆಗುವುದಿಲ್ಲ. ಯುವಜನರು ಅಭಿವೃದ್ಧಿಯ ಮೇಲೆ ಆಸಕ್ತಿ ಹೊಂದಿರುತ್ತಾರೆಯೇ ಹೊರತೂ ಸ್ಥಳೀಯ ವಿದ್ಯಮಾನಗಳ ಮೇಲೆ ಅಲ್ಲ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಪರೋಕ್ಷವಾಗಿ ದಾದ್ರಿ ಘಟನೆಯನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದ್ದಾರೆ. ‘ ಕೆಲವು ಸ್ಥಳೀಯ ಘಟನೆಗಳು ದುರದೃಷ್ಟಕರ. ಖಂಡನೀಯ. ಆದರೆ ಯಾವುದೇ ತೀರ್ಮಾನಕ್ಕೆ ಬರುವ ಮುನ್ನ  ಸ್ಥಳೀಯ ಪರಿಸ್ಥಿತಿಯನ್ನು  ಪರಿಶೀಲಿಸಬೇಕಾಗುತ್ತದೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.