ADVERTISEMENT

ದಾಲ್ಮಿಯಾ ಮೊಮ್ಮಗನ ವಿಚಾರಣೆ

ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜೂನ್ 2015, 11:18 IST
Last Updated 4 ಜೂನ್ 2015, 11:18 IST

ಕೋಲ್ಕತ್ತ (ಐಎಎನ್‌ಎಸ್‌): ಸಂಚಾರ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಜಗಮೋಹನ್‌ ದಾಲ್ಮಿಯಾ ಅವರ ಮೊಮ್ಮಗ ಆದಿತ್ಯ ಬಾಲ ನ್ಯಾಯ ಮಂಡಳಿ ಎದುರು ವಿಚಾರಣೆಗೆ ಹಾಜರಾಗಿದ್ದು, ಆತನ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

‘ಬುಧವಾರ ರಾತ್ರಿ ಪೂರ್ವ ವಲಯದ ಮುಖ್ಯರಸ್ತೆಯಲ್ಲಿ ಆದಿತ್ಯ ಇದ್ದ ಕಾರು ವಾಹನ ನಿಲುಗಡೆ ನಿಷೇಧಿಸಿರುವ ಪ್ರದೇಶದಲ್ಲಿ ನಿಂತಿತ್ತು. ನಿಯಮ ಉಲ್ಲಂಘನೆಗಾಗಿ ದಂಡ ಕಟ್ಟುವಂತೆ ಸಂಚಾರ ವಿಭಾಗದ ಸಿಬ್ಬಂದಿ ಕಾರಿನ ಚಾಲಕನಿಗೆ ತಿಳಿಸಿದ್ದಾರೆ. ಇದನ್ನು ಪ್ರಶ್ನಿಸಿ ಜಗಳ ತೆಗೆದಿರುವ ಆದಿತ್ಯ ಮತ್ತು ಆತನ ಕಾರು ಚಾಲಕ ಝಾಕಿರ್‌ ಹುಸೇನ್‌ ಇಬ್ಬರೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಕೋಲ್ಕತ್ತದ ಡಿಸಿಪಿ ಸಂತೋಷ್‌ ಪಾಂಡೆ ತಿಳಿಸಿದ್ದಾರೆ.

‘10ನೇ ತರಗತಿ ಓದುತ್ತಿರುವ ಆದಿತ್ಯ ಇನ್ನೂ ಅಪ್ರಾಪ್ತ. ಹೀಗಾಗಿ ಆತನನ್ನು ವಿಚಾರಣೆಗಾಗಿ ಬಾಲ ನ್ಯಾಯ ಮಂಡಳಿಗೆ ಕಳಿಸಲಾಗಿದೆ. ಝಾಕಿರ್‌ ಹುಸೇನ್‌ನನ್ನು ಜೂನ್‌ 17ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.