ADVERTISEMENT

ದಿನಬಳಕೆ ಸರಕು ಅಗ್ಗ ನಿರೀಕ್ಷೆ

ನವೆಂಬರ್‌ 9, 10ರಂದು ಸರಕು ಮತ್ತು ಸೇವಾತೆರಿಗೆ ಮಂಡಳಿ ಸಭೆ

ಪಿಟಿಐ
Published 5 ನವೆಂಬರ್ 2017, 19:50 IST
Last Updated 5 ನವೆಂಬರ್ 2017, 19:50 IST
ದಿನಬಳಕೆ ಸರಕು ಅಗ್ಗ ನಿರೀಕ್ಷೆ
ದಿನಬಳಕೆ ಸರಕು ಅಗ್ಗ ನಿರೀಕ್ಷೆ   

ನವದೆಹಲಿ (ಪಿಟಿಐ): ಜನಸಾಮಾನ್ಯರು ಬಳಸುವ ಮತ್ತು ಸಣ್ಣ ಹಾಗೂ ಮಧ್ಯಮ (ಎಸ್‌ಎಂಇ) ಕೈಗಾರಿಕೆಗಳು ತಯಾರಿಸುವ ಸರಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೊರೆ ಶೀಘ್ರದಲ್ಲಿಯೇ ತಗ್ಗುವ ನಿರೀಕ್ಷೆ ಇದೆ.

ಜಿಎಸ್‌ಟಿ ಮಂಡಳಿಯು ಇದೇ ಗುರುವಾರ ಮತ್ತು ಶುಕ್ರವಾರ ಸಭೆ ಸೇರಲಿದ್ದು, ದಿನ ಬಳಕೆಯ ಹಲವಾರು ಸರಕುಗಳ ಮೇಲಿನ ತೆರಿಗೆ ದರಗ
ಳನ್ನು ಇಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲಿದೆ.

ಯಂತ್ರಗಳನ್ನು ಬಳಸದೇ ತಯಾರಿಸಿದ ಪೀಠೋಪಕರಣ, ಪ್ಲಾಸ್ಟಿಕ್ ಉತ್ಪನ್ನ ಮತ್ತು ಶಾಂಪೂನಂತಹ ದಿನಬಳಕೆ ಸರಕುಗಳ ಮೇಲಿನ ತೆರಿಗೆ ದರ ತಗ್ಗಿಸುವ ಸಾಧ್ಯತೆ ಇದೆ. ಜತೆಗೆ ತೆರಿಗೆ ಲೆಕ್ಕಪತ್ರ ಸಲ್ಲಿಸುವುದನ್ನೂ (ರಿಟರ್ನ್ಸ್‌) ಸಭೆಯು ಸರಳಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜನಸಾಮಾನ್ಯರು ಹೆಚ್ಚು ಬಳಕೆ ಮಾಡುವಂತಹ ಕೆಲವು ಸರಕುಗಳಿಗೆ ಶೇ 28 ರಷ್ಟು ತೆರಿಗೆ ದರ ಇದೆ. ಅದನ್ನು ಶೇ 18ರಷ್ಟು ತೆರಿಗೆಗೆ  ತಗ್ಗಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿನ ಮಂಡಳಿಯು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಸ್‌ಎಂಇ) ಉದ್ಯಮಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೂ ತೆರಿಗೆ ದರಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ನಿರೀಕ್ಷೆ ಇದೆ. ಈ ಮೊದಲು ಕೆಲವು ಸರಕುಗಳಿಗೆ ಅಬಕಾರಿ ಸುಂಕದಿಂದ ವಿನಾಯ್ತಿ ನೀಡಲಾಗಿತ್ತು. ಅಥವಾ ವ್ಯಾಟ್‌ನಲ್ಲಿ ಕಡಿಮೆ ದರ ಇತ್ತು. ಜಿಎಸ್‌ಟಿಯಲ್ಲಿ ಅಂತಹ ಸರಕುಗಳ ತೆರಿಗೆ ದರ ಏರಿಕೆ ಕಂಡಿದೆ. ಅದನ್ನು ಪರಿಷ್ಕರಣೆ ಮಾಡುವ ಸಾಧ್ಯತೆ ಕಂಡುಬಂದಿದೆ.

ಎಲ್ಲಾ ರೀತಿಯ ಪೀಠೋಪಕರಣಗಳು ಶೇ 28 ರಷ್ಟು ತೆರಿಗೆ ಹಂತದ ವ್ಯಾಪ್ತಿಯಲ್ಲಿವೆ. ಆದರೆ, ಮಧ್ಯಮ ವರ್ಗ ಅತಿ ಹೆಚ್ಚು ಬಳಕೆ ಮಾಡುವಂತಹ ಮರದ ಪೀಠೋಪಕರಣಗಳನ್ನು ಅಸಂಘಟಿತ ವಲಯದ ಕುಶಲಕರ್ಮಿಗಳೇ ತಯಾರಿಸುತ್ತಿದ್ದಾರೆ. ಹೀಗಾಗಿ ಅಂತಹ ಪೀಠೋಪಕರಣಗಳ ಮೇಲಿನ ತೆರಿಗೆ ದರ ತಗ್ಗಿಸುವ ಒತ್ತಾಯ ಕೇಳಿ ಬರುತ್ತಿದೆ.ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆಯ  ಶೇ 80ರಷ್ಟು ಉದ್ದಿಮೆಯು ‘ಎಂಎಸ್‌ಎಂಇ’ ವಿಭಾಗದಲ್ಲಿ ಬರುತ್ತದೆ ಎಂಬುದನ್ನೂ ತಯಾರಕರು ಸರ್ಕಾರದ ಗಮನ ಸೆಳೆದಿದ್ದಾರೆ.

ಕೆಲವು ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ಶೇ 18 ರಷ್ಟು ತೆರಿಗೆ ಇದೆ. ಆದರೆ ಷವರ್‌ಬಾತ್‌, ಸಿಂಕ್ಸ್‌, ವಾಷ್‌ಬೇಸಿನ್‌, ಲ್ಯಾವೇಟರಿ ಪ್ಯಾನ್ಸ್‌, ಸೀಟ್ಸ್ ಮತ್ತು ಕವರ್‌, ಫ್ಲಷಿಂಗ್‌ ಸಿಸ್ಟರ್ನ್ಸ್‌ ಮತ್ತು ಸ್ಯಾನಿಟರಿವೇರ್‌ಗೆ ಬಳಸುವ ಪ್ಲಾಸ್ಟಿಕ್‌ಗಳು ಶೇ 28 ರ ತೆರಿಗೆ ವ್ಯಾಪ್ತಿಯಲ್ಲಿವೆ. ಇದನ್ನು ತಗ್ಗಿಸುವ ಅಗತ್ಯ ಇದೆ.

ತೂಕದ ಯಂತ್ರ, ಕಂಪ್ರೆಷರ್‌ಗಳಿಗೆ ಶೇ 28 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದನ್ನೂ ಶೇ 18ಕ್ಕೆ ತಗ್ಗಿಸುವ ಸಾಧ್ಯತೆ ಇದೆ. ಜಿಎಸ್‌ಟಿ ಜಾರಿಗೂ ಮೊದಲು, ಶೇ 90ರಷ್ಟು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ತಯಾರಿಸುವ ₹1.5 ಕೋಟಿಗಿಂತಲೂ ಕಡಿಮೆ ಮೌಲ್ಯದ ಉತ್ಪನ್ನಗಳಿಗೆ ಅಬಕಾರಿ ಸುಂಕದಿಂದ ವಿನಾಯ್ತಿ ನೀಡಲಾಗಿತ್ತು.

ಅಲ್ಲಿ ಬಳಕೆ ಮಾಡುವ ಯಂತ್ರಗಳಿಗೆ ಶೇ 14. 5ರಷ್ಟು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಇತ್ತು.  ‌‌ಕಂಪ‍್ರೆಷರ್‌ಗಳಿಗೆ ಜಿಎಸ್‌ಟಿಗೂ ಮೊದಲು ಶೇ 12. 5 ರಷ್ಟು ಅಬಕಾರಿ ಸುಂಕ ಮತ್ತು ಶೇ 5 ರಷ್ಟು ವ್ಯಾಟ್ ಸೇರಿಸಿ ಒಟ್ಟಾರೆ ಶೇ 17.5 ರಷ್ಟು ತೆರಿಗೆ ಇತ್ತು.  ಜಿಎಸ್‌ಟಿ ಮಂಡಳಿಯು ಈಗಾಗಲೇ 100ಕ್ಕೂ ಹೆಚ್ಚು ಸರಕುಗಳ ಮೇಲಿನ ತೆರಿಗೆ ದರಗಳನ್ನು ಇಳಿಸಿದೆ.

ತಿದ್ದುಪಡಿ ಸೂಚಿಸಲು ಸಮಿತಿ ರಚನೆ

ಜಿಎಸ್‌ಟಿ ಕಾಯ್ದೆ ಮತ್ತು ನಿಯಮಗಳಲ್ಲಿ ತರಬಹುದಾದ ಬದಲಾವಣೆ ಮತ್ತು ತಿದ್ದುಪಡಿಗಳ ಬಗ್ಗೆ ಚರ್ಚಿಸಿ ವರದಿ ನೀಡಲು ಕೇಂದ್ರ ಸರ್ಕಾರ ಪರಿಣತರ ಸಮಿತಿ ರಚಿಸಿದೆ. ಇದೇ 8ರಂದು ಸಮಿತಿಯ ಮೊದಲ ಸಭೆ ನಡೆಯಲಿದೆ. ಅಖಿಲ ಭಾರತ ವರ್ತಕರ ಒಕ್ಕೂಟದ (ಸಿಎಐಟಿ) ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೆಲ್‌ವಾಲ್‌ ಅವರನ್ನು ಸಮಿತಿಗೆ ನಾಮಕರಣ ಮಾಡಲಾಗಿದೆ.

ಅರ್ಘ್ಯ ಸೇನ್‌ಗುಪ್ತ, ವಿನೋದ್‌ ಜೈನ್‌, ಅಜಯ್‌ ಸಹಾಯ್‌ ಮತ್ತು ಓಂ ಪ್ರಕಾಶ್‌ ಮಿತ್ತಲ್‌ ಅವರನ್ನು ಈ ಸಮಿತಿಗೆ ನೇಮಿಸಲಾಗಿದೆ. ನೇರ ತೆರಿಗೆ ಕೇಂದ್ರೀಯ ಮಂಡಳಿಯ ನಿವೃತ್ತ ಮುಖ್ಯ ಕಮಿಷನರ್‌ ಗೌತಮ್‌ ರೇ ಅವರು ಸಮಿತಿಯ ಸಂಚಾಲಕರಾಗಿರಲಿದ್ದಾರೆ. ಇದೇ 30ರ ಒಳಗೆ ಸಮಿತಿ ತನ್ನ ವರದಿ ಸಲ್ಲಿಸಲಿದೆ ಎಂದು ‘ಸಿಎಐಟಿ’ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.