ADVERTISEMENT

ದಿವಾಳಿ ಮಸೂದೆಗೆ ಲೋಕಸಭೆ ಸಮ್ಮತಿ

ನಷ್ಟಪೀಡಿತ ಉದ್ಯಮಗಳ ಪುನಶ್ಚೇತನ ಸುಲಭ

​ಪ್ರಜಾವಾಣಿ ವಾರ್ತೆ
Published 5 ಮೇ 2016, 19:30 IST
Last Updated 5 ಮೇ 2016, 19:30 IST
ದಿವಾಳಿ ಮಸೂದೆಗೆ ಲೋಕಸಭೆ ಸಮ್ಮತಿ
ದಿವಾಳಿ ಮಸೂದೆಗೆ ಲೋಕಸಭೆ ಸಮ್ಮತಿ   

ನವದೆಹಲಿ (ಪಿಟಿಐ): ನಷ್ಟಪೀಡಿತ ಉದ್ಯಮ ಸಂಸ್ಥೆಗಳು ತಮ್ಮ ವಹಿವಾಟು ಕೊನೆಗೊಳಿಸುವ ಅಥವಾ ಪುನಶ್ಚೇತನಕ್ಕೆ ಯತ್ನಿಸುವುದನ್ನು   ಸುಲಭಗೊಳಿಸುವ ‘ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ಸಂಹಿತೆ’ ಮಸೂದೆಗೆ ಲೋಕಸಭೆ ಗುರುವಾರ ಅಂಗೀಕಾರ ನೀಡಿದೆ.

ಉದ್ಯಮ ವಹಿವಾಟು ಆರಂಭಿಸುವ ನಿಯಮಾವಳಿಗಳನ್ನು ಇನ್ನಷ್ಟು ಸರಳಗೊಳಿಸಲಿರುವ ಮಸೂದೆಯು, ಸುಸ್ತಿದಾರರ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳಲು ಮತ್ತು ಬ್ಯಾಂಕ್‌ಗಳು ತಮ್ಮ ವಸೂಲಾಗದ ಸಾಲದ (ಎನ್‌ಪಿಎ) ಮರುಪಾವತಿ  ಪ್ರಕ್ರಿಯೆ ತೀವ್ರಗೊಳಿಸಲೂ ನೆರವಾಗಲಿದೆ.

‘ಉದ್ದೇಶಪೂರ್ವಕ ಸುಸ್ತಿದಾರ’ರಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರು ಬ್ಯಾಂಕ್‌ಗಳ ಒಕ್ಕೂಟಕ್ಕೆ ₹ 9 ಸಾವಿರ ಕೋಟಿಗಳಿಗೂ ಹೆಚ್ಚು ಸಾಲ ಮರು ಪಾವತಿ ಮಾಡಬೇಕಾಗಿರುವುದು   ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿರುವ ಸಂದರ್ಭದಲ್ಲಿಯೇ ಈ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿರುವುದು ಮಹತ್ವದ ಸಂಗತಿಯಾಗಿದೆ.

‘ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೆ, ಉದ್ಯಮ ವಹಿವಾಟು ಆರಂಭಿಸಲು ಪೂರಕ ಪರಿಸರ ಕಲ್ಪಿಸುವ ವಿಷಯದಲ್ಲಿ ಭಾರತದ ಸ್ಥಾನಮಾನವು  ಜಾಗತಿಕ ಮಟ್ಟದಲ್ಲಿ 130ನೆ ಸ್ಥಾನಕ್ಕೆ ಏರಲಿದೆ’ ಎಂದು ಹಣಕಾಸು ರಾಜ್ಯ ಸಚಿವ ಜಯಂತ್‌ ಸಿನ್ಹಾ ಹೇಳಿದ್ದಾರೆ.

ರಾಜ್ಯಸಭೆಯು ಮುಂದಿನ ವಾರ ಈ ಮಸೂದೆಗೆ ತನ್ನ ಸಮ್ಮತಿ ಮುದ್ರೆ ಒತ್ತುವ ನಿರೀಕ್ಷೆ ಇದೆ. ಕಾಂಗ್ರೆಸ್‌ ಕೂಡ ಮಸೂದೆ ಬೆಂಬಲಿಸುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.