ADVERTISEMENT

ದೀರ್ಘಕಾಲ ರಾಷ್ಟ್ರಪತಿ ಆಡಳಿತ ಸಲ್ಲ

ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಚಾಟಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಹಲವು ತಿಂಗಳಿನಿಂದ ತಲೆದೋರಿದ್ದ ಅನಿಶ್ಚಿತತೆ ಶೀಘ್ರ ಅಂತ್ಯವಾಗುವ ಸಾಧ್ಯತೆಯಿದೆ.

ದೆಹಲಿ ವಿಧಾನಸಭೆ ವಿಸರ್ಜಿಸುವಂತೆ ಕೋರಿ ಆಮ್‌ ಆದ್ಮಿ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭ­ದಲ್ಲಿ ಮುಖ್ಯ ನ್ಯಾಯಮೂರ್ತಿ ಎಚ್‌. ಎಲ್‌. ದತ್ತು ನೇತೃತ್ವದ ಐವರು ನ್ಯಾಯ­ಮೂರ್ತಿಗಳ ಪೀಠ, ಸರ್ಕಾರ ರಚನೆಗೆ ಸಂಬಂಧಿಸಿ ಐದು ತಿಂಗಳ ಕಾಲ  ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಇರುವುದಕ್ಕೆ ಕೇಂದ್ರ ಸರ್ಕಾರ ಹಾಗೂ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅವ­ರನ್ನು ತರಾಟೆಗೆ ತೆಗೆದುಕೊಂಡಿತು.

ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಪತಿ ಆಡ­ಳಿತ­ವನ್ನು ಸದಾ ಮುಂದುವರಿಸು­ವಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್‌, ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು ಏಕೆ ಎಂದು ಪ್ರಶ್ನಿಸಿತು.

ಬಿಜೆಪಿಗೆ ತಾಕತ್ತು ಇಲ್ಲ
ಬಿಜೆಪಿಗೆ ದೆಹಲಿಯಲ್ಲಿ ಹೊಸದಾಗಿ ವಿಧಾನಸಭಾ ಚುನಾವಣೆ  ಎದುರಿಸುವ ತಾಕತ್ತು ಇಲ್ಲ. ಹೀಗಾಗಿ ಬಿಜೆಪಿ  ಚುನಾವಣೆ ನಡೆಸಲು ಅನಗತ್ಯ ವಿಳಂಬ ಮಾಡುವ ಮೂಲಕ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ. ಒಂದು ವೇಳೆ  ಅಗತ್ಯ ಸಂಖ್ಯಾಬಲವಿದ್ದರೆ ಬಿಜೆಪಿ ಇಷ್ಟೊತ್ತಿಗೆ ಸರ್ಕಾರ ರಚಿಸಿ ಹಳೆಯ ಮಾತಾಗಿರುತಿತ್ತು
– ಅರವಿಂದ ಕೇಜ್ರಿವಾಲ್‌, ಆಮ್ ಆದ್ಮಿ ಪಕ್ಷದ ಸಂಚಾಲಕ

ಕುಂಟು ನೆಪದಲ್ಲಿ ನಿಸ್ಸೀಮ
ವಿಧಾನಸಭಾ ಚುನಾವಣೆಯನ್ನು ಸಾಧ್ಯವಾದಷ್ಟೂ ಮುಂದೂಡಲು ಬಿಜೆಪಿ ವಿವಿಧ ತಂತ್ರಗಳನ್ನು ಅನುಸರಿಸುತ್ತಿದೆ. ಒಂದಾದ ನಂತರ ಮತ್ತೊಂದು ಹೊಸ ಕುಂಟು ನೆಪಗಳನ್ನು ಹುಡುಕುತ್ತಿದೆ. ದೆಹಲಿಯಲ್ಲಿ ಎಎಪಿ–ಬಿಜೆಪಿ ಮೈತ್ರಿ ಸರ್ಕಾರ  ರಚನೆಯನ್ನು ನಾವು ವಿರೋಧಿಸುತ್ತೇವೆ.
– ಕಾಂಗ್ರೆಸ್‌

ತಕ್ಕ ಶಾಸ್ತಿ ನಂತರ ದೆಹಲಿಗೆ

ಪ್ರಧಾನಿಯಾಗುವ ಭರದಲ್ಲಿ ಜನಾದೇಶವನ್ನು ಧಿಕ್ಕರಿಸಿದ ಆಮ್ ಆದ್ಮಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ದೆಹಲಿ ಜನರನ್ನು ನಡು ನೀರಿನಲ್ಲಿ ಕೈಬಿಟ್ಟು ವಾರಾಣಸಿಗೆ ಹೊರಟು ಹೋದರು. ದೇಶದ ಜನತೆ ಪಾಠ ಕಲಿಸಿದ ನಂತರ ಮರಳಿ ದೆಹಲಿಗೆ ಬಂದಿದ್ದಾರೆ
  – ಬಿಜೆಪಿ

ಕೋರ್ಟ್‌ ಹೇಳಿದ್ದೇನು?:  ಕೇಂದ್ರ ಸರ್ಕಾರ ಯಾವಾಗಲೂ ಅರ್ಜಿ ವಿಚಾ­ರಣೆಯ ಹಿಂದಿನ ದಿನ ಹೇಳಿಕೆ ನೀಡು­ವುದು ಏಕೆ? ಮೊದಲೇ ಈ ಬಗ್ಗೆ ನಿರ್ಧ­ರಿಸುವುದಿಲ್ಲ ಏಕೆ? ಎಷ್ಟು ದಿನ ಹೀಗೆಯೇ ಮುಂದುವರಿಸಿಕೊಂಡು ಹೋಗುತ್ತೀರಿ  ಎಂದು ಕೋರ್ಟ್‌ ಸರ್ಕಾರವನ್ನು ಪ್ರಶ್ನಿ­ಸಿತು. ಸರ್ಕಾರ ರಚನೆಗಾಗಿ ಬಿಜೆಪಿಗೆ ಆಹ್ವಾನ ನೀಡುವ ನಿರ್ಧಾರವನ್ನು ಈ ಮೊದಲೇ ತೆಗೆದುಕೊಳ್ಳಬಹುದಿತ್ತು ಎಂದೂ ಕೋರ್ಟ್‌ ಅಭಿಪ್ರಾಯ­ಪಟ್ಟಿತು. ‘ನಾವು ಜವಾಬ್ದಾರಿಯಿಂದ ತಪ್ಪಿಸಿ­ಕೊಳ್ಳು­­ವಂತಿಲ್ಲ.

ಈ ಪ್ರಕರಣದ ಗಂಭೀರತೆ­ಯನ್ನು ಪರಿಗಣಿಸಿ ಅರ್ಜಿಯ ವಿಚಾರಣೆ ನಡೆಸುತ್ತೇವೆ. ಪ್ರಜಾಪ್ರಭುತ್ವ­ದಲ್ಲಿ ಜನರಿಗೆ ಸರ್ಕಾರವನ್ನು ಹೊಂದುವ ಹಕ್ಕು ಇದೆ. ರಾಜ್ಯಪಾಲರ ಆಳ್ವಿಕೆ ಸರಿಯಲ್ಲ. ‘ಇಂತಹ ವಿಚಾರಗಳಿಗೆ ಸಾಕಷ್ಟು ಕಾಲಾ­ವಕಾಶ ಬೇಕಿರುವುದರಿಂದ ಹಲವು ಬಾರಿ ವಿಚಾರಣೆಯನ್ನು ಮುಂದಕ್ಕೆ ಹಾಕಿದೆವು. ಆದರೆ, ಲೆಫ್ಟಿ­ನೆಂಟ್‌ ಗವರ್ನರ್‌ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ’ ಎಂದೂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿ­ಸಿತು.

ಸರಳ ಬಹುಮತ ಇಲ್ಲ:   70 ಶಾಸಕ ಬಲದ ದೆಹಲಿ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 34 ಶಾಸಕರ ಬೆಂಬಲದ ಅಗತ್ಯ­ವಿದೆ.  ಪ್ರಸ್ತುತ ಬಿಜೆಪಿ ಬಲ 28­ರಷ್ಟಿದೆ. ಲೋಕಸಭೆಗೆ ಆಯ್ಕೆಯಾ­ಗಿ­ರು­­ವುದರಿಂದ ಮೂವರು ಶಾಸಕರು ರಾಜೀ­ನಾಮೆ ನೀಡಿದ್ದು,  ಈ ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯ­ಲಿದೆ.   ಕಳೆದ ವರ್ಷದ ಚುನಾ­ವಣೆಯ ನಂತರ  ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ­ಹೊಮ್ಮಿದ್ದರೂ ಸರ್ಕಾರ ರಚಿಸಲು ಹಿಂದೇಟು ಹಾಕಿತ್ತು.

28 ಶಾಸಕ ಬಲದ ಆಮ್‌ ಆದ್ಮಿ ಪಕ್ಷ ಕಾಂಗ್ರೆಸ್‌ ನೆರವಿನಿಂದ ಅಧಿಕಾರ ಹಿಡಿ­ದಿತ್ತು. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಬರೆದ ಪತ್ರದಲ್ಲಿ ಲೆಫ್ಟಿನೆಂಟ್‌ ಗವರ್ನರ್‌, ‘ಡಿಸೆಂಬರ್‌ 2013ರಲ್ಲಿ ಚುನಾವಣೆ ನಡೆದಿರುವು­ದರಿಂದ ಇಷ್ಟು ಬೇಗ ಚುನಾವಣೆ ನಡೆಸುವುದು ಸರಿಯಲ್ಲ. ವಿಧಾನಸಭೆ ವಿಸರ್ಜನೆಗೂ ಮುನ್ನ ಸರ್ಕಾರ ರಚನೆ ಸಾಧ್ಯತೆಯನ್ನು ಪರಿಶೀಲಿಸಬೇಕಿದೆ. ಹಾಗಾಗಿ ಅತಿ­ದೊಡ್ಡ  ಪಕ್ಷವಾದ ಬಿಜೆಪಿಗೆ ಸರ್ಕಾರ ರಚನೆ ಆಹ್ವಾನ ನೀಡಲು ಅನುಮತಿ ನೀಡ­ಬೇಕು. ಬಿಜೆಪಿ ನೀಡುವ ಪ್ರತಿಕ್ರಿಯೆ­ಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ’ ಎಂದಿದ್ದರು.

ದೆಹಲಿ ವಿಧಾನಸಭೆ ವಿಸರ್ಜನೆ ಕುರಿತಂತೆ ಆಗಸ್ಟ್‌ 5ರಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್‌ ಐದು ವಾರಗಳ ಒಳಗೆ ಈ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆದೇಶಿಸಿತ್ತು. ಇಷ್ಟು ದೀರ್ಘ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರುವುದು ಸರಿಯಲ್ಲ ಎಂದೂ ಕೋರ್ಟ್‌ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT