ADVERTISEMENT

ದುಡಿಯುವ ಪತ್ನಿಯ ಜೀವನಾಂಶ ಕಡಿಮೆ ಮಾಡುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ನವದೆಹಲಿ: ‘ಪತ್ನಿಗೆ ಹಣ ಸಂಪಾದಿಸುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ ಆಕೆಗೆ ನೀಡಬೇಕಿರುವ ಜೀವನಾಂಶವನ್ನು ದಾಂಪತ್ಯ ಕಲಹ ಪ್ರಕರಣ ವಿಚಾರಣೆಯ ಹಂತದಲ್ಲಿ ಇದ್ದಾಗ ಕಡಿಮೆ ಮಾಡುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
 
ಹಣ ಸಂಪಾದಿಸುವ ಸಾಮರ್ಥ್ಯ ಪತ್ನಿಗೆ ಇದೆ ಎಂಬ ಕಾರಣಕ್ಕೆ ಪತಿಯು, ಪತ್ನಿ ಮತ್ತು ಪುತ್ರನಿಗೆ ನೀಡಬೇಕಿದ್ದ ಜೀವನಾಂಶದ ಮೊತ್ತ ಕಡಿಮೆ ಮಾಡಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಮತ್ತು ಪ್ರಫುಲ್‌ ಸಿ. ಪಂತ್ ಅವರಿದ್ದ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ರದ್ದು ಮಾಡಿದೆ.
 
ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯವು ಪತ್ನಿ ಮತ್ತು ಪುತ್ರನಿಗೆ ಜೀವನಾಂಶದ ರೂಪದಲ್ಲಿ ₹ 25 ಸಾವಿರ ನೀಡಬೇಕು ಎಂದು ಪತಿಗೆ ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿ, ಹಣ ಸಂಪಾದಿಸುವ ಶಕ್ತಿ ಪತ್ನಿಗೆ ಇದೆ ಎಂಬುದನ್ನು ಪರಿಗಣಿಸಿ ಹೈಕೋರ್ಟ್‌, ₹ 12 ಸಾವಿರ ಪಾವತಿಸಿದರೆ ಸಾಕು ಎಂದು ಹೇಳಿತ್ತು.
 
ಹೈಕೋರ್ಟ್‌ ಆದೇಶ ಪ್ರಶ್ನಿಸಿ ಪತ್ನಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
 
‘ಹೈಕೋರ್ಟ್‌ ನೀಡಿರುವ ಆದೇಶ ನಮಗೆ ಸಮಾಧಾನ ತಂದಿಲ್ಲ. ಹಿರಿಯ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿರುವ ಪತಿಯ ತಿಂಗಳ ವೇತನ ₹ 80 ಸಾವಿರಕ್ಕಿಂತ ಹೆಚ್ಚು ಎಂದು ನಮಗೆ ತಿಳಿಸಲಾಗಿದೆ. ಅಲ್ಲದೆ, ಪತಿಯು 26 ಎಕರೆ ನೀರಾವರಿ ಜಮೀನು ಹೊಂದಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ.
 
ಕೌಟುಂಬಿಕ ನ್ಯಾಯಾಲಯ ಆದೇಶಿಸಿದ್ದಂತೆ, ₹ 25 ಸಾವಿರ ಜೀವನಾಂಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.