ADVERTISEMENT

ದೆಹಲಿಗೆ ಅಲೆದಾಟ ಬೇಕಿಲ್ಲ

ಸರ್ಕಾರಿ ಅಧಿಕಾರಿಗಳಿಗೆ ಸಚಿವ ವೆಂಕಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಮೇ 2014, 20:10 IST
Last Updated 30 ಮೇ 2014, 20:10 IST

ಬೆಂಗಳೂರು: ‘ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಆಗಬೇಕಾದ ಕೆಲಸಗಳಿಗಾಗಿ ರಾಜ್ಯ ಸರ್ಕಾರಗಳ ಅಧಿಕಾರಿಗಳು ಇನ್ನು ದೆಹಲಿಗೆ ಅಲೆದಾಡಬೇಕಿಲ್ಲ. ಇಲಾಖೆ ಅಧಿಕಾರಿಗಳ ಜೊತೆ ನಾನೇ ರಾಜ್ಯಗಳ ರಾಜಧಾನಿಗಳಿಗೆ ತೆರಳಿ ಕೆಲಸ ಮಾಡಿಕೊಡುತ್ತೇನೆ’ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಘೋಷಿಸಿದರು.

ರಾಜ್ಯದ ನಗರಾಭಿವೃದ್ಧಿ ಸಚಿವ ಖಮರುಲ್ ಇಸ್ಲಾಂ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಎರಡೂ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಶುಕ್ರವಾರ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
.
‘ನಾನು ಕೇಂದ್ರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವನಾಗಿದ್ದ ಅವಧಿಯಲ್ಲಿ ಆ ಸಚಿವಾಲಯವನ್ನೇ ರಾಜ್ಯಗಳಿಗೆ ಕರೆತಂದು ಕೆಲಸ ಮಾಡಿದ್ದೆ. ಈಗ ನಗರಾಭಿವೃದ್ಧಿ ಇಲಾಖೆಯಲ್ಲೂ ಅದೇ ಮಾದರಿ ಅನುಸರಿಸುತ್ತೇನೆ. ರಾಜ್ಯ ಸರ್ಕಾರಗಳು ಕಳುಹಿಸುವ ಪ್ರಸ್ತಾವಗಳು ದೀರ್ಘಕಾಲ ಬಾಕಿ

ನಾನು ಕರ್ನಾಟಕಕ್ಕೆ ಸೇರಿದ­ವನು. ಅಧಿಕಾರ ವಹಿಸಿಕೊಂಡ ತಕ್ಷಣ ಇಲ್ಲಿಗೆ ಬರುವುದು ನನ್ನ ಕರ್ತವ್ಯವಾಗಿತ್ತು. ಅದಕ್ಕಾಗಿಯೇ ಬಂದಿದ್ದೇನೆ. ನನ್ನ ಇಲಾಖೆಗೆ ಸಂಬಂಧಿಸಿ­ದಂತೆ ರಾಜ್ಯದಲ್ಲಿ ನಡೆ­ಯು­ತ್ತಿರುವ ಪ್ರಮುಖ ಕೆಲಸಗಳ ಬಗ್ಗೆಯೂ ಮಾಹಿತಿ ಪಡೆದಿದ್ದೇನೆ. ನನ್ನ ಸಚಿವಾಲಯದ ಯೋಜನೆಗಳಲ್ಲಿ ರಾಜ್ಯಕ್ಕೆ ಆದ್ಯತೆ ನೀಡಲು ಪ್ರಯತ್ನಿಸುತ್ತೇನೆ’.
– ವೆಂಕಯ್ಯ ನಾಯ್ಡು

ಉಳಿಯಲು ಬಿಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳ ಮುಖಾಮುಖಿ ಭೇಟಿಯಲ್ಲಿ ವಿಲೇವಾರಿ ಮಾಡುತ್ತೇನೆ’ ಎಂದರು.

ನಗರಗಳ ಸುಧಾರಣೆಯ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಕೆಲಸ ಮಾಡಲಿದೆ. ಒಳ್ಳೆಯ ಸಾರಿಗೆ ವ್ಯವಸ್ಥೆ, ಗುಣಮಟ್ಟದ ಕುಡಿಯುವ ನೀರು ಪೂರೈಕೆ, ನೈರ್ಮಲ್ಯ, ವಸತಿ, ನಗರ ಪ್ರದೇಶದ ಜನರ ಜೀವನಮಟ್ಟ ಸುಧಾರಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಿದೆ ಎಂದು ತಿಳಿಸಿದರು.

ಎಲ್ಲರಿಗೂ ವಸತಿ: ಪ್ರಸ್ತುತ ದೇಶದ ಶೇಕಡ 32ರಷ್ಟು ಜನ ನಗರಗಳಲ್ಲಿ ವಾಸಿಸುತ್ತಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ ಶೇ 50 ತಲುಪುವ ನಿರೀಕ್ಷೆ ಇದೆ. 2022ರ ವೇಳೆಗೆ ನಗರ ಪ್ರದೇಶಗಳಲ್ಲಿ ವಾಸಿಸುವ ಎಲ್ಲ ಜನರಿಗೂ ವಸತಿ ಸೌಲಭ್ಯ ಕಲ್ಪಿಸುವುದು ನೂತನ ಸರ್ಕಾರದ ಪ್ರಮುಖ ಗುರಿಗಳಲ್ಲಿ ಒಂದು ಎಂದರು.

ನಗರ ಪ್ರದೇಶಗಳಲ್ಲಿನ ವಸತಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸೋಮವಾರ ದೆಹಲಿಯಲ್ಲಿ ಸಭೆ ನಡೆಸಲಾಗುವುದು. ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

100 ಅತ್ಯುತ್ತಮ (ಸ್ಮಾರ್ಟ್) ನಗರಗಳ ನಿರ್ಮಾಣ, ಉಪನಗರಗಳ ನಿರ್ಮಾಣ, ಅವಳಿ ನಗರಗಳ ನಿರ್ಮಾಣ ಯೋಜನೆಗಳಲ್ಲಿ ಕರ್ನಾಟಕಕ್ಕೆ ಪ್ರಾಶಸ್ತ್ಯ ದೊರೆಯಲಿದೆ. ಆದರೆ, ತಾವು ರಾಜ್ಯಕ್ಕೆ ಸೀಮಿತವಾಗಿ ಈಗಲೇ ಘೋಷಣೆಗಳನ್ನು ಹೊರಡಿಸಲು ಸಾಧ್ಯವಿಲ್ಲ ಎಂದರು.

ಮುಂಚೂಣಿಯಲ್ಲಿ ರಾಜ್ಯ: ಜೆನರ್ಮ್ ಮತ್ತು ಪೌರಾಡಳಿತ ಸುಧಾರಣಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಪೌರಾಡಳಿತ ಸುಧಾರಣಾ ಕಾರ್ಯಕ್ರಮಗಳ ಜಾರಿಯಲ್ಲಿ ಶೇ 96ರಷ್ಟು ಪ್ರಗತಿಯಾಗಿದ್ದು, ಮೊದಲ ಸ್ಥಾನದಲ್ಲಿದೆ. ನಗರಗಳಿಗೆ ಮೂಲಸೌಕರ್ಯ ಕಲ್ಪಿಸುವುದು, ರಾಜೀವ್ ಆವಾಸ್ ಯೋಜನೆಗಳ ಜಾರಿಯಲ್ಲೂ ಕರ್ನಾಟಕ ಮುಂದಿದೆ ಎಂದು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ 30 ನಗರಗಳು ಮತ್ತು ಪಟ್ಟಣಗಳಲ್ಲಿ ಸಾರಿಗೆ ಸೌಕರ್ಯ ಕಲ್ಪಿಸಲು 2,104 ಬಸ್ಸುಗಳನ್ನು ಮಂಜೂರು ಮಾಡಲಾಗಿದೆ. ಇದಕ್ಕಾಗಿ ₨ 971.24 ಕೋಟಿ ವೆಚ್ಚ ಮಾಡುತ್ತಿದ್ದು, ಕೇಂದ್ರ ಸರ್ಕಾರ ₨ 569.98 ಕೋಟಿ ಭರಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT