ADVERTISEMENT

ದೆಹಲಿ ವಿಧಾನ ಸಭೆಯಲ್ಲಿ ಕಾಗದದ ಕ್ಷಿಪಣಿ ಹಾರಾಟ!

ಪ್ರತಿಭಟಿಸಿದ ಇಬ್ಬರಿಗೆ ಒಂದು ತಿಂಗಳು ಜೈಲು ಶಿಕ್ಷೆ

ಪಿಟಿಐ
Published 28 ಜೂನ್ 2017, 19:42 IST
Last Updated 28 ಜೂನ್ 2017, 19:42 IST
ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಕಾಗದದ ಕ್ಷಿಪಣಿಗಳನ್ನು ಹಾರಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದರು   –ಪಿಟಿಐ ಚಿತ್ರ
ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಕಾಗದದ ಕ್ಷಿಪಣಿಗಳನ್ನು ಹಾರಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದರು –ಪಿಟಿಐ ಚಿತ್ರ   

ನವದೆಹಲಿ: ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ದೆಹಲಿ ವಿಧಾನಸಭೆ ಒಳಗೆ ಇಬ್ಬರು ವ್ಯಕ್ತಿಗಳು ಕಾಗದದ ಕ್ಷಿಪಣಿಗಳನ್ನು ಹಾರಿಸಿ ಪ್ರತಿಭಟನೆ ವ್ಯಕ್ತಪಡಿಸಿದ ಪ್ರಸಂಗ ಬುಧವಾರ ನಡೆಯಿತು.

ತಲೆಗೆ ರುಮಾಲು ಸುತ್ತಿದ್ದ ಇಬ್ಬರು ವ್ಯಕ್ತಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ದಿಢೀರನೆ ಕಾಗದದ ಕ್ಷಿಪಣಿಗಳನ್ನು ಹಾರಿಸಿ ‘ಇಂಕಿಲಾಬ್‌ ಜಿಂದಾಬಾದ್‌’ ಎಂದು ಘೋಷಣೆಗಳನ್ನು ಕೂಗಿದರು. ತಕ್ಷಣವೇ ಭದ್ರತಾ ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದರು.
ಈ ಇಬ್ಬರನ್ನು ರಂಜನ್‌ ಕುಮಾರ್‌ ಮತ್ತು ಜಗದೀಪ್‌ ರಾಣಾ ಎಂದು ಗುರುತಿಸಲಾಗಿದೆ.

‘ನಾವು ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು. ಅರವಿಂದ ಕೇಜ್ರಿವಾಲ್  ನೇತೃತ್ವದ ಪಕ್ಷ ಹಾಗೂ  ದೆಹಲಿ ಸಚಿವ ಸತ್ಯೇಂದ್ರ ಜೈನ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಿಂದ ಅಸಮಾಧಾನಗೊಂಡಿದ್ದೇವೆ’ ಎಂದು ಕಾಗದದ ಒಳಗಿನ ಭಾಗದಲ್ಲಿ ಮುದ್ರಿಸಲಾಗಿದೆ.

ADVERTISEMENT

ಇಬ್ಬರನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ಯುವಾಗ ನಿತೀನ್‌ ತ್ಯಾಗಿ, ಅಮಾನತುಲ್ಲಾ ಖಾನ್‌ ಮತ್ತು ಜರ್ನೈಲ್‌ ಸಿಂಗ್‌ ಸೇರಿದಂತೆ ಕೆಲವು ಆಪ್‌ ಶಾಸಕರು ಸದನದಿಂದ ಹೊರಗೆ ಬಂದರು. ಕಾಗದ ತೂರಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಇಬ್ಬರನ್ನು ಥಳಿಸಿದರು. ಸುಮಾರು ಅರ್ಧ ಗಂಟೆ ಕಾಲ ಗೊಂದಲದ ವಾತಾವರಣವಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ಘಟನೆ ಬಳಿಕ ಸದನವನ್ನು ಕೆಲಕಾಲ ಮುಂದೂಡಲಾಯಿತು.

ಸದನದ ಪಾವಿತ್ರ್ಯತೆಗೆ ಭಂಗ ತಂದಿದ್ದಕ್ಕಾಗಿ ಇಬ್ಬರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಮ್‌ ಆದ್ಮಿ ಪಕ್ಷದ ಶಾಸಕರು ಆಗ್ರಹಿಸಿದರು.
ಸದನದ ಒಳಗೆ ಗದ್ದಲ ಮಾಡಿದ್ದಕ್ಕಾಗಿ ಇಬ್ಬರು ಪ್ರತಿಭಟನಾಕಾರರಿಗೆ ಒಂದು ತಿಂಗಳು ಜೈಲು ಶಿಕ್ಷೆಯನ್ನು ಸ್ಪೀಕರ್‌ ರಾಮ್‌ ನಿವಾಸ್‌ ಗೋಯಲ್‌ ವಿಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.