ADVERTISEMENT

ದೆಹಲಿ ವಿವಿ ವಿದ್ಯಾರ್ಥಿ ಸಂಘ ಎಬಿವಿಪಿ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2014, 19:30 IST
Last Updated 13 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (ಡಿಯುಎಸ್‌ಯು) ಚುನಾ­ವಣೆ­ಯಲ್ಲಿ ಎಲ್ಲಾ ನಾಲ್ಕು ಸ್ಥಾನಗಳನ್ನೂ ಗೆಲ್ಲುವ ಮೂಲಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) 18 ವರ್ಷಗಳ ಬಳಿಕ ‘ಕ್ಲೀನ್‌ ಸ್ವೀಪ್‌’ ಸಾಧಿಸಿದೆ.
ಕಳೆದ ವರ್ಷದ ಚುನಾವಣೆಯಲ್ಲಿ ಮೂರು ಸ್ಥಾನ ಜಯಿಸಿದ್ದ ಎಬಿವಿಪಿ ಈ ಬಾರಿ ಎಲ್ಲಾ ನಾಲ್ಕೂ ಸ್ಥಾನಗಳನ್ನು ಗೆದ್ದುಕೊಂಡಿದೆ.

ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ಎಸ್‌ಯುಐ) ಎದುರು ಸ್ಪರ್ಧಿಸಿದ್ದ ಎಬಿವಿಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಯ ಸ್ಥಾನಗಳನ್ನು ಉತ್ತಮ ಅಂತರದಿಂದ ಗೆದ್ದುಕೊಂಡಿದೆ.

ಮೋಹಿತ್‌ ನಗರ್‌ ಅಧ್ಯಕ್ಷರಾಗಿ ಆಯ್ಕೆಯಾದರೆ, ಪ್ರವೇಶ್‌ ಮಲಿಕ್‌ ಉಪಾಧ್ಯಕ್ಷ ಹುದ್ದೆಯ ಚುನಾ­ವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ಕನ್ನಿಕಾ ಶೆಖಾ­ವತ್ ಮತ್ತು ಅಶುತೋಷ್‌ ಮಥೂರ್‌ ಕ್ರಮವಾಗಿ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ಚುನಾಯಿತರಾಗಿದ್ದಾರೆ.

ಕಳೆದ ವರ್ಷ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಗಳಲ್ಲಿ ಎಬಿವಿಪಿ ಜಯಗಳಿಸಿತ್ತು. ಎನ್‌ಎಸ್‌ಯುಐ ಕಾರ್ಯದರ್ಶಿ ಸ್ಥಾನವನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿತ್ತು.

‘ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ನಾಲ್ಕು ವರ್ಷದ ಪದವಿ ಯೋಜನೆಯನ್ನು ರದ್ದುಪಡಿಸುವುದಲ್ಲಿ ಯಶಸ್ವಿ­­ಯಾದ ಎಬಿವಿಪಿ ತನ್ನ ಆಶ್ವಾಸನೆಗಳನ್ನು ಈಡೇರಿಸಿದೆ. ನಾವು ಮೋದಿ ಅವರ ಅಲೆಯ ಕಾರಣದಿಂದಲೇ ಜಯಿಸಿದ್ದೇವೆ’ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ರೋಹಿತ್‌ ಚಾಹಲ್‌ ಹೇಳಿದರು. ಇಲ್ಲಿ ನಡೆಯುವ ಚುನಾವಣೆಯನ್ನು ಪಕ್ಷ ರಾಜಕೀಯಕ್ಕೆ ಏರುವ ಮೆಟ್ಟಿಲು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.