ADVERTISEMENT

ದೇಶದ ಮೊದಲ ಬುಲೆಟ್‌ ರೈಲು

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ನವದೆಹಲಿ (ಪಿಟಿಐ): ಎನ್‌ಡಿಎ ಸರ್ಕಾರದ ಚೊಚ್ಚಲ ರೈಲ್ವೆ ಬಜೆಟ್‌ನಲ್ಲಿ ನರೇಂದ್ರ ಮೋದಿ ಅವರ ಮಹತ್ವಾ­ಕಾಂ­ಕ್ಷೆಯ ‘ಬುಲೆಟ್‌ ರೈಲು’ ಯೋಜನೆ ಪ್ರಕಟವಾಗಿದ್ದು, ಮೊದಲ ‘ಬುಲೆಟ್‌ ರೈಲು’  ಮುಂಬೈ–ಅಹಮದಾಬಾದ್‌ ಮಧ್ಯೆ ಸಂಚರಿಸಲಿದೆ.

ಇದಲ್ಲದೇ, ದೇಶದ ನಾಲ್ಕು ಮಹಾನಗರ­ಗಳನ್ನು ಜೋಡಿ­ಸುವ ಅತಿ ವೇಗದ ಚತುಷ್ಕೋನ ರೈಲು ಯೋಜನೆ ಕೂಡ ಬಜೆಟ್‌ನಲ್ಲಿ ಅನಾವರಣಗೊಂಡಿದೆ.

ಆಯ್ದ ವಲಯಗಳಲ್ಲಿ ಪ್ರತಿಗಂಟೆಗೆ 200 ಕಿ.ಮೀ ವರೆಗೆ ರೈಲು ವೇಗ ಹೆಚ್ಚಿಸಲು ಇನ್ನಷ್ಟು ಪ್ರಯತ್ನ ಮಾಡುವ ಬಗ್ಗೆಯೂ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.ಈ ಸಂಬಂಧ ದೆಹಲಿ–ಆಗ್ರಾ, ದೆಹಲಿ–ಚಂಡೀಗಡ ಮತ್ತು ಮುಂಬೈ–ಅಹಮದಾಬಾದ್‌ ಸೇರಿದಂತೆ ಒಂಬತ್ತು ವಲಯಗಳನ್ನು ಗುರುತಿಸಲಾಗಿದೆ.

ದೆಹಲಿ–ಕಾನ್ಪುರ, ನಾಗಪುರ–ಬಿಲಾಸ್‌ಪುರ, ಮೈಸೂರು–­ಬೆಂಗಳೂರು ಚೆನ್ನೈ, ಮುಂಬೈ–ಗೋವಾ, ಚೆನ್ನೈ–ಹೈದರಾಬಾದ್‌ ಮತ್ತು ನಾಗಪುರ–ಸಿಕಂದರಾಬಾದ್‌ ವಲಯಗಳಲ್ಲಿ ಸಂಚಿರುವ ರೈಲು ವೇಗವನ್ನು ಪ್ರತಿ ತಾಸಿಗೆ 160–200 ಕಿ.ಮೀ ಹೆಚ್ಚಿಸಲಾಗುತ್ತದೆ. ಅತಿವೇಗದ ರೈಲು ಯೋಜನೆಗಾಗಿ ಬಜೆಟ್‌ನಲ್ಲಿ ₨100ಕೋಟಿ ನಿಗದಿ ಮಾಡಲಾಗಿದೆ.

ಹಾಲು, ಹಣ್ಣು, ತರಕಾರಿ ಸಾಗಣೆಗೆ ವಿಶೇಷ ರೈಲು
ಹಾಲು, ಹಣ್ಣು ಮತ್ತು ತರಕಾರಿ ಸಾಗಣೆಗೆ ವಿಶೇಷ ರೈಲುಗಳನ್ನು ಆರಂಭಿಸುವ ಪ್ರಸ್ತಾವ ಬಜೆಟ್‌ನಲ್ಲಿದೆ.ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ ಸಾಗಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ  ಹಾಲಿನ ಸಾಗಣೆಗೆ ವಿಶೇಷ ರೈಲು ಮತ್ತು ಹಣ್ಣು, ತರಕಾರಿ ಸಾಗಣೆಗೆ ಶೀತಲೀಕರಣ ಸೌಲಭ್ಯ ಹೊಂದಿರುವ ರೈಲುಗಳನ್ನು ಆರಂಭಿಸುವ ಪ್ರಸ್ತಾವವಿದೆ.

ಇದರಿಂದ ದೇಶದ ವಿವಿಧ ಭಾಗಗಳಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವವರು ಹೆಚ್ಚಿನ ಲಾಭ ಗಳಿಸಲು  ಸಹಾಯವಾಗಲಿದೆ. ಅಲ್ಲದೇ ಆಹಾರ ಪದಾರ್ಥಗಳು ಪೋಲಾಗುವುದನ್ನೂ ತಪ್ಪಿಸಬಹುದು ಎಂದು ರೈಲ್ವೆ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮ ಮತ್ತು ಸಹಕಾರಿ ಸಂಸ್ಥೆಯಾದ ಅಮೂಲ್‌ ಸಹಯೋಗದಲ್ಲಿ ಹಾಲು ಸಾಗಣೆಗೆ ವಿಶೇಷ ರೈಲಿನ ಸೌಲಭ್ಯ ನೀಡಲಾಗುವುದು ಎಂದು ಸದಾನಂದ ಗೌಡ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT