ADVERTISEMENT

ದೇಶವನ್ನೇ ಜೈಲಾಗಿಸಿದ ತುರ್ತುಸ್ಥಿತಿ: ಮೋದಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 22:30 IST
Last Updated 26 ಜೂನ್ 2016, 22:30 IST
ದೇಶವನ್ನೇ ಜೈಲಾಗಿಸಿದ ತುರ್ತುಸ್ಥಿತಿ: ಮೋದಿ
ದೇಶವನ್ನೇ ಜೈಲಾಗಿಸಿದ ತುರ್ತುಸ್ಥಿತಿ: ಮೋದಿ   

ನವದೆಹಲಿ (ಪಿಟಿಐ): ನಲವತ್ತು ವರ್ಷಗಳ ಹಿಂದೆ ದೇಶದ ಮೇಲೆ ತುರ್ತು ಸ್ಥಿತಿ ಹೇರಿದ ಕರಾಳ ದಿನಗಳ ಅನುಭವಗಳನ್ನು ಮೆಲುಕು ಹಾಕಿದ ಪ್ರಧಾನಿ, ‘ಪ್ರಜಾಪ್ರಭುತ್ವವೇ ದೇಶದ ತಾಕತ್ತು ಎಂಬುದನ್ನು ಸಾಮಾನ್ಯ ಜನತೆ ಆಗ ರುಜುವಾತು ಮಾಡಿದರು’ ಎಂದು ನೆನಪಿಸಿಕೊಂಡಿದ್ದಾರೆ. ಈ ಮೂಲಕ ತುರ್ತುಪರಿಸ್ಥಿತಿ ಮತ್ತೆ ಚರ್ಚೆಯ ವಿಷಯವಾಗುವಂತೆ ಮಾಡಿದ್ದಾರೆ.

ತುರ್ತುಪರಿಸ್ಥಿತಿ ಹೇರಿದ 1975ರ ಜೂನ್‌ 25 ಮತ್ತು 26ರ ನಡುವಣ ಆ ರಾತ್ರಿಯನ್ನು ಅವರು ‘ಕರಾಳ ರಾತ್ರಿ’ ಎಂದು ಬಣ್ಣಿಸಿದ್ದಾರೆ. ಬಾನುಲಿಯ ‘ಮನದ ಮಾತು’ ಕಾರ್ಯಕ್ರಮವನ್ನು ಕೆಲವರು ಲೇವಡಿ ಮಾಡಿದ್ದಾರೆ, ಟೀಕಿಸಿದ್ದಾರೆ. ಆದರೆ ನಾವು ಪ್ರಜಾಪ್ರಭುತ್ವಕ್ಕೆ ಬದ್ಧರಾಗಿರುವುದರಿಂದ ಇದನ್ನು ಮುಂದುವರಿಸಲು ಸಾಧ್ಯವಾಗುತ್ತಿದೆ ಎಂದು ಅವರು ಪ್ರಜಾಪ್ರಭುತ್ವದ ತಾಕತ್ತನ್ನು ಪ್ರಶಂಸಿದ್ದಾರೆ. 

ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಸ್ಥಿತಿ ಹೇರಿ ಜನರ ಹಕ್ಕುಗಳನ್ನು ಕಿತ್ತುಕೊಂಡರು. ಪತ್ರಿಕಾ ಕಾರ್ಯಾಲಯಗಳಿಗೆ ಬೀಗ ಹಾಕಲಾಯಿತು. ಆಕಾಶವಾಣಿಯಲ್ಲಿ ಒಂದೇ ಧ್ವನಿ ಕೇಳಿಸತೊಡಗಿತು. ಜಯಪ್ರಕಾಶ್ ನಾರಾಯಣ್ ಸೇರಿದಂತೆ ಲಕ್ಷಾಂತರ ಜನರನ್ನು ಜೈಲಿಗೆ ತಳ್ಳಲಾಯಿತು. ಆದರೂ ಈ ದೇಶದ ಜನತೆ ಪ್ರಜಾಪ್ರಭುತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿ ಆದರು ಎಂದು ಪ್ರಧಾನಿ ಅಂದಿನ ಕರಾಳ ದಿನಗಳ  ವಿವರ ನೀಡಿದರು.

ಸೋನಿಯಾ ವಿರುದ್ಧ ವಾಗ್ದಾಳಿ
ತಿರುವನಂತಪುರ (ಪಿಟಿಐ): ‘ಹಿಂದೂ ಭಯೋತ್ಪಾದನೆ’ ಎಂಬ ಹೊಸ ಸಂಕಟವನ್ನು ಹುಟ್ಟು ಹಾಕಿ 2011–12ರಲ್ಲಿ ಸೋನಿಯಾಗಾಂಧಿ ದೇಶದಲ್ಲಿ ಇನ್ನೊಂದು ತುರ್ತು ಪರಿಸ್ಥಿತಿ ಹೇರುವ ಪ್ರಯತ್ನ ಮಾಡಿದ್ದರು’ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಆರೋಪಿಸಿದ್ದಾರೆ. ತುರ್ತುಪರಿಸ್ಥಿತಿಯ 41ನೇ ವರ್ಷಾಚರಣೆ ಅಂಗವಾಗಿ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತುರ್ತುಪರಿಸ್ಥಿತಿ ನಂತರ ಅಧಿಕಾರಕ್ಕೆ ಬಂದ ಜನತಾ ಸರ್ಕಾರ ಸಂವಿಧಾನದಲ್ಲಿ ಮಾಡಿರುವ ತಿದ್ದುಪಡಿಯಿಂದಾಗಿ ಇನ್ನು ಮುಂದೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲು ಯಾರಿಂದಲೂ ಸಾಧ್ಯವಿಲ್ಲ. ಹೀಗಿದ್ದರೂ ಸೋನಿಯಾ ಗಾಂಧಿ 2011–12ರಲ್ಲಿ ‘ಹಿಂದೂ ಭಯೋತ್ಪಾದನೆ’ ಹೆಸರಿನಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಪ್ರಯತ್ನ ಮಾಡಿದ್ದರು. ಸದ್ಯದಲ್ಲೇ ಈ ಕುರಿತ ಇನ್ನಷ್ಟು ಮಾಹಿತಿಯನ್ನು ಬಿಡುಗಡೆ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ಪಠ್ಯದ ಮೂಲಕ ಮಾಹಿತಿ
ಲಖನೌ (ಪಿಟಿಐ): ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದ ದೌರ್ಜನ್ಯಗಳ ಕುರಿತು ಪಠ್ಯ ಪುಸ್ತಕಗಳ ಮೂಲಕ ಮಾಹಿತಿ ನೀಡಬೇಕು ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್‌ ಅಬ್ಬಾಸ್ ನಖ್ವಿ ಹೇಳಿದರು.

‘ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಏಕೆ, ಹೇಗೆ ಎಂಬುದು ಮುಕ್ಕಾಲುಪಾಲು ಜನರಿಗೆ ಗೊತ್ತಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೇಳಿದಂತೆಯೇ, ತುರ್ತು ಸ್ಥಿತಿ ವೇಳೆ ನಡೆದ ದೌರ್ಜನ್ಯಗಳ ಬಗ್ಗೆ ಪಠ್ಯ ಪುಸ್ತಕಗಳ ಮೂಲಕ ಮಾಹಿತಿ ನೀಡಬೇಕು’ ಎಂದು ಅವರು ಸುದ್ದಿಗಾರರ ಬಳಿ ಹೇಳಿದರು.

ಈ ಕುರಿತು ಸಂಬಂಧಪಟ್ಟ ಸಚಿವಾಲಯದ ಜೊತೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು. ‘ತುರ್ತು ಸ್ಥಿತಿ ಹೇರಿದ ದಿನದಿಂದಲೇ ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಅಡಿಗಲ್ಲು ಹಾಕಿದಂತಾಗಿತ್ತು. ಕಾಂಗ್ರೆಸ್‌ ಮುಕ್ತ ಭಾರತವೆಂದರೆ, ಊಳಿಗಮಾನ್ಯ ಮನಸ್ಥಿತಿಯಿಂದ ಹೊರಬರುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT