ADVERTISEMENT

ಎನ್‌ಇಇಟಿ: ಎರಡು ಅವಕಾಶ ಇಲ್ಲ

ಮೇ 1ರಂದು ಪರೀಕ್ಷೆ ಬರೆದವರು ಜುಲೈ 24ರಂದು ಹಾಜರಾಗುವಂತಿಲ್ಲ *ಕಾಮೆಡ್‌–ಕೆ ವೈದ್ಯಕೀಯ ಪರೀಕ್ಷೆ ರದ್ದು * ಕೇಂದ್ರ ಒಪ್ಪಿದರೆ ರಾಜ್ಯಗಳಿಗೆ ಅವಕಾಶ,

​ಪ್ರಜಾವಾಣಿ ವಾರ್ತೆ
Published 6 ಮೇ 2016, 20:05 IST
Last Updated 6 ಮೇ 2016, 20:05 IST
ಮೇ 1ರಂದು ಎನ್‌ಇಇಟಿ ಮೊದಲ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯರು
ಮೇ 1ರಂದು ಎನ್‌ಇಇಟಿ ಮೊದಲ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯರು   

ನವದೆಹಲಿ: ವೈದ್ಯಕೀಯ (ಎಂಬಿಬಿಎಸ್‌) ಮತ್ತು ದಂತ ವೈದ್ಯಕೀಯ (ಬಿಡಿಎಸ್‌) ಕೋರ್ಸ್‌ಗಳ ಪ್ರವೇಶಾತಿಗೆ ಮೇ 1ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ಎನ್‌ಇಇಟಿ) ಹಾಜರಾದ ವಿದ್ಯಾರ್ಥಿಗಳು ಜುಲೈ 24ರಂದು ನಡೆಯಲಿರುವ ಎರಡನೇ ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ.

‘ಎನ್‌ಇಇಟಿ–1ಕ್ಕೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಎನ್‌ಇಇಟಿ–2ಕ್ಕೆ ಹಾಜರಾಗಲು ಅವಕಾಶವಿಲ್ಲ. ಮೊದಲ ಹಂತದ ಪರೀಕ್ಷೆಗೆ ಹಾಜರಾಗದವರು ಮಾತ್ರ ಎರಡನೇ ಹಂತದ ಪರೀಕ್ಷೆ ಬರೆಯಬಹುದು’ ಎಂದು ನ್ಯಾಯಮೂರ್ತಿಗಳಾದ ಎ.ಆರ್‌. ದವೆ, ಶಿವಕೀರ್ತಿ ಸಿಂಗ್‌ ಮತ್ತು ಆದರ್ಶ್‌ ಕುಮಾರ್‌ ಗೋಯಲ್‌ ಅವರಿದ್ದ ಪೀಠ ಹೇಳಿತು.

‘ಎನ್‌ಇಇಟಿ–1ಗೆ ಹಾಜರಾಗಲು ಅರ್ಜಿ ಸಲ್ಲಿಸಿದ್ದ 6.5 ಲಕ್ಷ ವಿದ್ಯಾರ್ಥಿಗಳಲ್ಲಿ 40 ಸಾವಿರ ಮಂದಿ ಹಾಜರಾಗಿರಲಿಲ್ಲ. ಅವರಿಗೆ ಮಾತ್ರ ಎರಡನೇ ಹಂತದ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು.  ಪರೀಕ್ಷಾ ಕೇಂದ್ರಗಳ ಕೊರತೆಯಿರುವ ಕಾರಣ ಎಲ್ಲರಿಗೂ ಮತ್ತೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪರ ವಾದಿಸುತ್ತಿರುವ  ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿಂಕಿ ಆನಂದ್‌ ಪೀಠಕ್ಕೆ ತಿಳಿಸಿದರು. ಈ ಬಗ್ಗೆ ಮೇ 9 ರಂದು ನಿರ್ಧಾರ ಕೈಗೊಳ್ಳುವುದಾಗಿ ಪೀಠ ತಿಳಿಸಿತು.

ಈ ಬಾರಿ ರಾಜ್ಯಗಳಿಗೆ ಅವಕಾಶ ಸಾಧ್ಯತೆ: ಕೇಂದ್ರ ಸರ್ಕಾರ ಒಪ್ಪಿದರೆ 2016–17ರ ಶೈಕ್ಷಣಿಕ ವರ್ಷದಲ್ಲಿ ಆಯಾ ರಾಜ್ಯ ಸರ್ಕಾರಗಳು ತಮ್ಮದೇ ಆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಆಕ್ಷೇಪ ಇಲ್ಲ ಎಂಬ ಇಂಗಿತವನ್ನು ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದೆ.

ಈ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಏನು ಎಂಬುದನ್ನು ತಿಳಿಸುವಂತೆ ಸಾಲಿಸಿಟರ್‌ ಜನರಲ್‌ ರಂಜಿತ್‌ ಕುಮಾರ್‌ ಅವರಿಗೆ ತಿಳಿಸಿರುವ ಪೀಠ, ವಿಚಾರಣೆಯನ್ನು ಮೇ 9 ಕ್ಕೆ ಮುಂದೂಡಿದೆ.

‘ವಿವಿಧ ರಾಜ್ಯಗಳು ತಮ್ಮ  ಕಾನೂನಿಗೆ ಅನುಗುಣವಾಗಿ ನಡೆಸಿರುವ  ಸಿಇಟಿಗೆ ಹಾಜರಾಗಿರುವ ಅಥವಾ ಹಾಜರಾಗಬೇಕಿರುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಗೊಂದಲ ಇದೆ. ಸಾಲಿಸಿಟರ್‌ ಜನರಲ್‌  ಅವರ ವಾದ ಆಲಿಸಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಪೀಠ ಹೇಳಿತು. 

‘ಖಾಸಗಿ ಕಾಲೇಜುಗಳು ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸುವಂತಿಲ್ಲ ಎಂಬ ಆದೇಶವನ್ನು ನಾವು ಪುನರುಚ್ಚರಿಸುತ್ತೇವೆ. ಆದರೆ ಈ ವರ್ಷದ ಮಟ್ಟಿಗೆ ಆಯಾ ರಾಜ್ಯಗಳಿಗೆ ಸಿಇಟಿ ನಡೆಸಲು ಅವಕಾಶ ನೀಡುವುದನ್ನು ಪರಿಗಣಿಸುತ್ತೇವೆ. ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಅಗತ್ಯ’ ಎಂದು ಪೀಠ ತಿಳಿಸಿತು.
ಕೆಲವು ರಾಜ್ಯಗಳು ತಮ್ಮದೇ ಆದ ಸಿಇಟಿ ನಡೆಸುವುದಾಗಿ ತಿಳಿಸಿದ್ದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಶುಕ್ರವಾರ ನಡೆದ ವಿಚಾರಣೆ ವೇಳೆ, ‘ಈ ವರ್ಷ ಮಾತ್ರ ನಡೆಸಲು ಅನುಮತಿ ನೀಡಬಹುದು’ ಎಂದು ಪೀಠಕ್ಕೆ ತಿಳಿಸಿತು.

‘ಎನ್‌ಇಇಟಿಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಒಂದೆರಡು ದಿನಗಳಲ್ಲಿ ವಿವಿಧ ರಾಜ್ಯಗಳ ಸಚಿವರ ಜತೆ ಸಭೆ ನಡೆಸಲಿದೆ. ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಮೇ 9 ಕ್ಕೆ ಸುಪ್ರೀಂ ಕೋರ್ಟ್‌ಗೆ ತಿಳಿಸುತ್ತೇನೆ’ ಎಂದು ಸಾಲಿಸಿಟರ್‌ ಜನರಲ್‌ ತಿಳಿಸಿದರು.

‘ಕಾನೂನು ಪ್ರಕಾರ ಎನ್‌ಇಇಟಿ ನಡೆಸುವುದಕ್ಕೆ ನಮ್ಮ ಬೆಂಬಲವಿದೆ. ರಾಜ್ಯ ಸರ್ಕಾರಗಳ ಜತೆ ಸಮಾಲೋಚನೆ ನಡೆಸಿ ವಿವಾದ ಬಗೆಹರಿಸಲು ಬಯಸಿದ್ದೇವೆ’ ಎಂದರು.

ನ್ಯಾಯಪೀಠದ ಈ ಮೌಖಿಕ ಅಭಿಪ್ರಾಯ ಎನ್‌ಇಇಟಿಗೆ ವಿರೋಧ ವ್ಯಕ್ತಪಡಿಸಿದ್ದ ರಾಜ್ಯಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ನಮ್ಮ ಸಿಇಟಿ ಪರೀಕ್ಷೆಗೆ ಕಾನೂನಿನ ಬೆಂಬಲ ಇದೆ ಎಂದು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಕೆಲವು ರಾಜ್ಯಗಳನ್ನು  ಪ್ರತಿನಿಧಿಸಿದ್ದ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.

ಎಂಜಿನಿಯರಿಂಗ್‌ಗೆ ಅಷ್ಟೇ ಪರೀಕ್ಷೆ
ಬೆಂಗಳೂರು:
ಖಾಸಗಿ ಕಾಲೇಜುಗಳು ಮತ್ತು ಒಕ್ಕೂಟಗಳು  ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಕಾಮೆಡ್‌–ಕೆ ರದ್ದುಪಡಿಸಿದೆ. ಆದರೆ ನಿಗದಿಯಂತೆ ಮೇ 8ರಂದು ಎಂಜಿನಿಯರಿಂಗ್‌ ಪ್ರವೇಶಕ್ಕೆ ಪರೀಕ್ಷೆ ನಡೆಯಲಿದೆ ಎಂದು ಸಿಇಒ ಎ.ಎಸ್‌.ಶ್ರೀಕಾಂತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.