ADVERTISEMENT

ನಾಳೆ ‘ಐಆರ್‌ಎನ್‌ಎಸ್‌ಎಸ್‌ 1ಬಿ’ ಉಪಗ್ರಹ ಉಡಾವಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ಚೆನ್ನೈ (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ‘ಭಾರತೀಯ ಪ್ರಾದೇಶಿಕ ನ್ಯಾವಿಗೇಷನಲ್‌ (ಸಮುದ್ರ ಮತ್ತು ವಾಯು ಸಂಚಾರ ಮಾರ್ಗಕ್ಕೆ ನೆರವು ನೀಡುವ) ಉಪಗ್ರಹ ವ್ಯವಸ್ಥೆ’ ಸರಣಿಯ  ಎರಡನೇ ಉಪಗ್ರಹ ‘ಐಆರ್‌­ಎನ್­ಎಸ್‌ಎಸ್‌ 1ಬಿ’   ಶ್ರೀಹರಿ­ಕೋಟಾದ ಸತೀಶ್‌ ಧವನ್‌ ಉಡ್ಡಯನ ಕೇಂದ್ರ­ದಿಂದ ಶುಕ್ರವಾರ (ಏ.4) ಸಂಜೆ 5.14 ನಿಮಿಷಕ್ಕೆ ಉಡಾವಣೆಗೆ ಸಜ್ಜಾಗಿದೆ.
 
ಈ ನಿಟ್ಟಿನಲ್ಲಿ ಐವತ್ತೆಂಟೂವರೆ ಗಂಟೆಗಳ ಕ್ಷಣಗಣನೆ ಬುಧವಾರ ಬೆಳಿಗ್ಗೆ 6.44 ನಿಮಿಷದಿಂದ ಆರಂಭವಾಗಿದೆ. ‘ಐಆರ್‌ಎನ್ಎಸ್‌ಎಸ್‌ 1ಬಿ’   ಉಪಗ್ರಹ ಸಮುದ್ರ ಮತ್ತು ವಾಯು ಮಾರ್ಗಗಳ ಕುರಿತು ನಿಖರ ಮಾಹಿತಿ ನೀಡುವುದರ ಜೊತೆಗೆ, ಪ್ರಾದೇಶಿಕ ವಲಯದಲ್ಲಿ 1,500 ಕಿ.ಮೀ. ಪರಿಧಿಯು ಉಪಗ್ರಹದ ಪ್ರಾಥಮಿಕ ಸೇವಾ ವಲಯದ ವ್ಯಾಪ್ತಿಗೆ ಬರಲಿದೆ. ಇದು ಪ್ರಕೃತಿ ವಿಕೋಪ ನಿರ್ವಹಣೆಗೂ ಸಹಾಯಕವಾಗಲಿದೆ.

‘ಐಆರ್‌ಎನ್­ಎಸ್‌ಎಸ್‌’ ಯೋಜ­ನೆಯು ಏಳು ಉಪ­ಗ್ರಹಗಳ ಉಡಾ­ವಣಾ ಕಾರ್ಯಕ್ರಮ­ವಾಗಿದೆ.  ‘ಐಆರ್‌­ಎನ್ಎಸ್‌ಎಸ್‌– 1’ ಉಪಗ್ರಹವನ್ನು 2013ರ ಜುಲೈ 1ರಂದು ಉಡಾವಣೆ ಮಾಡಲಾಗಿತ್ತು. ಈ ಸರಣಿಯ ಇನ್ನೆರಡು ಉಪಗ್ರಹ­ಗಳನ್ನು ಈ ವರ್ಷಾಂತ್ಯ­ದೊಳಗೆ ಉಡಾವಣೆ ಮಾಡಲಾಗುವುದು ಎಂದು ‘ಇಸ್ರೊ’ ಅಧಿಕಾರಿಗಳು ಹೇಳಿದ್ದಾರೆ.

‘ಐಆರ್‌ಎನ್ಎಸ್‌ಎಸ್‌’ ಅಮೆರಿಕದ ‘ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ’ (ಜಿಪಿಎಸ್‌), ರಷ್ಯಾದ ‘ಗ್ಲೋನಾಸ್‌’ ಯೂರೋಪಿನ ‘ಗೆಲಿಲಿಯೊ’, ಚೀನಾದ  ‘ಬಿಯಿದೊಯು’, ಜಪಾನ್‌ನ ‘ಕ್ವಾಸಿ ಜೆನಿತ್‌’ ಉಪಗ್ರಹಗಳಿಗೆ ಸಮನಾದ ಸಾಮರ್ಥ್ಯ ಹೊಂದಿದೆ ಎಂದು ‘ಇಸ್ರೊ’ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.