ADVERTISEMENT

ನಿಗದಿಯಂತೆ ‘ಪ್ರತಿಭಟನಾ ಚುಂಬನ’

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 19:30 IST
Last Updated 1 ನವೆಂಬರ್ 2014, 19:30 IST

ಕೊಚ್ಚಿ (ಪಿಟಿಐ): ‘ಪ್ರತಿಭಟನಾ ಚುಂಬನ’ ತಡೆಯಲು ಕೇರಳ ಹೈಕೋರ್ಟ್‌ ನಿರಾಕರಿಸಿದ ಬೆನ್ನಲ್ಲೇ ಪೂರ್ವ ನಿಗದಿಯಂತೆ ಕಾರ್ಯಕ್ರಮ ನಡೆಸಲು ಸಂಘಟಕರು ಪ್ರಕಟಿಸಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಪೊಲೀಸರ ಅನುಮತಿ ಇನ್ನೂ ಸಿಕ್ಕಿಲ್ಲ.

‘ಇದು ಚುಂಬನದ ಸಮಾವೇಶ ಅಲ್ಲ’ ಎಂದು ಹೇಳಿರುವ ಸಂಘಟಕರು, ನೈತಿಕ ಪೊಲೀಸ್‌ಗಿರಿ ಖಂಡಿಸಿ ಸಮಾನ­ಮನಸ್ಕರು ಕೈಗೊಂಡಿರುವ ಜಾಗೃತಿ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಏಡ್ಸ್‌ ವಿರುದ್ಧ ಕಾರ್ಯ­ಕ್ರಮ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.
ಕಿರುಚಿತ್ರ ನಿರ್ದೇಶಕ ರಾಹುಲ್‌ ಪಶುಪಾಲನ್‌ ನೇತೃತ್ವದ ‘ಫ್ರೀ ಥಿಂಕರ್ಸ್‌’ ಹೆಸರಿನ ಗುಂಪು ‘ಕಿಸ್‌ ಆಫ್‌ ಲವ್‌’ ಪ್ರತಿಭಟನೆಗೆ ಕರೆ ನೀಡಿದೆ.

ಯುವ ಮತ್ತು ಹಿರಿಯ ಜೋಡಿ­ಗಳು ನ.2 ರಂದು ಸಂಜೆ 5 ಗಂಟೆಗೆ ಮರೀನ್‌ ಡ್ರೈವ್‌ಗೆ ಬಂದು ಪರಸ್ಪರ ಅಪ್ಪಿಕೊಳ್ಳುವುದು ಮತ್ತು ಚುಂಬಿಸುವ ಮೂಲಕ ಪ್ರತಿಭಟನೆ ನಡೆಸುವುದು ಇದರ ಉದ್ದೇಶ. ಇದರಲ್ಲಿ 700ರಿಂದ 1,000 ಜನರ ಭಾಗವಹಿಸುವ ಸಾಧ್ಯತೆ ಇದೆ.
‘ನಾಲ್ಕು ದಿನಗಳ ಹಿಂದೆ ಪೊಲೀಸರ ಅನುಮತಿ ಕೇಳಿದ್ದೆವು. ಇಲ್ಲಿಯವರೆಗೂ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ನೈತಿಕ ಪೊಲೀಸ್‌ಗಿರಿ ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ಏಡ್ಸ್‌ ಜಾಗೃತಿಗೂ ಕಾರ್ಯಕ್ರಮ ಹಮ್ಮಿ ಕೊಳ್ಳಲಿದ್ದೇವೆ’ ಎಂದು ತಿಳಿಸಿದರು.

ಕಾರ್ಯಕ್ರಮದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆಯು ಸಂಜೆ ಐದು ಗಂಟೆಗೆ ಆರಂಭವಾಗಲಿದ್ದು, ಘೋಷಣಾ ಫಲಕದೊಂದಿಗೆ ಜನರು ಸೇರಲಿದ್ದಾರೆ. ಎಂದು ಎಂಜಿನೀಯರ್‌ ರಾಹುಲ್ ಪಶುಪಾಲನ್‌ ತಿಳಿಸಿದ್ದಾರೆ. ಪ್ರತಿಭಟನಾ ಚುಂಬನ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜು ಮತ್ತು ತಿರುವನಂತಪುರದ ಶ್ರೀ ಸತ್ಯಸಾಯಿ ಅನಾಥಾಶ್ರಮ ಟ್ರಸ್ಟ್‌ನ ಇಬ್ಬರು ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.