ADVERTISEMENT

ನಿಗದಿಯಾಗಿದ್ದು ₨ 1 ಕೋಟಿ, ಕೊಟ್ಟಿದ್ದು ₨ 49 ಲಕ್ಷ

ಶಾಸ್ತ್ರೀಯ ಭಾಷೆ ಅಭಿವೃದ್ಧಿ: ಕನ್ನಡಕ್ಕಾಗಿ ಅನುದಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ನವದೆಹಲಿ: ಕನ್ನಡ ಶಾಸ್ತ್ರೀಯ ಭಾಷೆ ಅಭಿವೃದ್ಧಿ ಯೋಜನೆಗಳಿಗೆ ಈ ವರ್ಷ ಒಂದು ಕೋಟಿ ರೂಪಾಯಿ ನಿಗದಿ ಮಾಡಿದ್ದು 49 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ. ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯ ಮುದ್ದ ಹನುಮೇಗೌಡರು ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ, ಮಾನವ ಸಂಪನ್ಮೂಲ ಸಚಿವಾಲಯ ಸಚಿವೆ ಸ್ಮೃತಿ ಇರಾನಿ ಈ ಉತ್ತರ ನೀಡಿದರು.

ತೆಲುಗು ಶಾಸ್ತ್ರೀಯ ಭಾಷೆಗೂ ಕನ್ನಡದಷ್ಟೇ ಹಣವನ್ನು ಕೊಡಲಾಗಿದೆ. ತಮಿಳು ಭಾಷೆಗೆ 10 ಕೋಟಿ ರೂಪಾಯಿ ನಿಗದಿ ಮಾಡಲಾಗಿದ್ದು, ಮೂರು ಕೋಟಿ ಬಿಡುಗಡೆ ಮಾಡಲಾಗಿದೆ. ಸಂಸ್ಕೃತ ಭಾಷೆಗೆ ಅತೀ ಹೆಚ್ಚು ಅಂದರೆ 230 ಕೋಟಿ ನಿಗದಿಪಡಿಸಲಾಗಿದೆ. ಈವರೆಗೆ 40 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

ಇದಲ್ಲದೆ, ಕನ್ನಡದ ಪೀಠ ಸ್ಥಾಪನೆಗೆ ಕರ್ನಾಟಕದ ಕೇಂದ್ರ ವಿವಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಿಂದ 75 ಲಕ್ಷ ರೂಪಾಯಿ ನೀಡಲಾಗಿದೆ ಎಂದು ಸ್ಮೃತಿ ಇರಾನಿ ತಿಳಿಸಿದರು. ತಮಿಳು ಭಾಷೆ ಸಂಶೋಧನೆಗೆ 10 ಕೋಟಿ ರೂಪಾಯಿ ನಿಗದಿಪಡಿಸಿ, ಕನ್ನಡಕ್ಕೆ ಬರೀ ಒಂದು ಕೋಟಿ ತೆಗೆದಿಟ್ಟಿರುವುದನ್ನು ತಾರತಮ್ಯವೆಂದು ಹೇಳಲಾಗದು.

ತಮಿಳು ಭಾಷೆಯಲ್ಲಿ ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕನ್ನಡ ಶಾಸ್ತ್ರೀಯ ಭಾಷೆ ಸಂಶೋಧನೆ ಇನ್ನೂ ಆರಂಭವಾಗಬೇಕಿದೆ. ಮೈಸೂರಿನ ಕೇಂದ್ರ ಭಾಷಾ ಸಂಶೋಧನಾ ಸಂಸ್ಥೆಯಲ್ಲೇ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರವೂ ಇದೆ ಎಂದು ಅವರು ಹೇಳಿದರು.

ಕನ್ನಡ ಶಾಸ್ತ್ರೀಯ ಭಾಷೆ ಸಂಶೋಧನಾ ಸಂಸ್ಥೆ ಸ್ವತಂತ್ರ ಅಸ್ಥಿತ್ವ ಪಡೆದುಕೊಂಡು, ಮುಖ್ಯಸ್ಥರು ನೇಮಕ ಆಗುವವರೆಗೂ ಯಾವುದೇ ಯೋಜನೆಗಳು ಕಾರ್ಯಗತ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಸಿಐಐಎಲ್‌ನಿಂದ ಪ್ರತ್ಯೇಕಿಸಿ ಬೆಂಗಳೂರಿಗೆ ಸ್ಥಳಾಂತರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು ಕಳೆದ ವರ್ಷ ಮಾರ್ಚ್‌ 13ರಂದು ದೆಹಲಿಯಲ್ಲಿ ಆಗ್ರಹಿಸಿದ್ದರು. 

ಕನ್ನಡ ಶಾಸ್ತ್ರೀಯ ಭಾಷೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಇದುವರೆಗೆ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅದರಲ್ಲಿ ಖರ್ಚಾಗಿರುವುದು ಕೇವಲ 72 ಲಕ್ಷ ಮಾತ್ರ ಎಂದೂ ಚಂದ್ರು ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.