ADVERTISEMENT

ನೂತನ ಲೋಕಸಭೆಯ ಚಿತ್ರಣ ಬದಲು...

​ಪ್ರಜಾವಾಣಿ ವಾರ್ತೆ
Published 4 ಜೂನ್ 2014, 19:30 IST
Last Updated 4 ಜೂನ್ 2014, 19:30 IST

ನವದೆಹಲಿ (ಪಿಟಿಐ): ಮೊದಲ ಅಧಿವೇಶನ ಸೇರಿದ 16ನೇ ಲೋಕಸಭೆ ದೃಶ್ಯ ಇತ್ತೀಚಿನ ಚುನಾವಣಾ ಫಲಿ­ತಾಂಶ­­ವನ್ನು ಬಿಂಬಿಸುವಂತೆ ಸಂಪೂರ್ಣ ಬದಲಾಗಿತ್ತು.

ಆಡಳಿತ ಪಕ್ಷದ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪೂರ್ಣ ಬಲವನ್ನು ಹೊಂದಿದ್ದರೆ, ವಿರೋಧ ಪಕ್ಷ ಕಾಂಗ್ರೆಸ್‌ ಕೇವಲ 44 ಸ್ಥಾನ­ಗಳೊಂದಿಗೆ ಅತ್ಯಂತ ಬಲಹೀನ­ವಾಗಿ ಕಂಡಿತು.

ಸಂಸದರ ಮೇಜು ಕುಟ್ಟುವ ಸ್ವಾಗತ­ದೊಂ­ದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸದನ ಪ್ರವೇಶಿಸಿದರು. ಅವ­ರನ್ನು ಹಿಂಬಾಲಿಸಿಕೊಂಡು ಬಿಜೆಪಿ ನಾಯಕ ಎಲ್‌. ಕೆ. ಅಡ್ವಾಣಿ ಬಂದರು.

ಕೆನೆ ಬಣ್ಣದ ಕುರ್ತಾ ಧರಿಸಿದ್ದ ಮೋದಿ ಅವರು ಮುಗುಳು ನಗುತ್ತಲೇ ಮೊದಲ ಸಾಲಿನಲ್ಲಿದ್ದ ಸದಸ್ಯರತ್ತ ಸಾಗಿ ಶುಭಾಶಯ ವಿನಿಮಯ ಮಾಡಿ­ಕೊಂಡರು. ಕಾಂಗ್ರೆಸ್ ಸದಸ್ಯರು ಕುಳಿ­ತಿದ್ದ ಸಾಲಿ­ನತ್ತ ಮೋದಿ ಅವರು ಹೆಜ್ಜೆ ಹಾಕಿ­ದಾಗ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಎದ್ದು ಮುಂದಕ್ಕೆ ಹೋದರು. ಇಬ್ಬರೂ ಕೈ­ಮುಗಿದು ಶುಭಾಶಯ ಹೇಳಿದರು.

ಮೋದಿ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಅವರ ಕೈಕುಲುಕಿದರು. ಮೋದಿ ಅವ­ರಿಗೆ ಮುಲಾಯಂ ಅಭಿನಂದನೆ ತಿಳಿ­ಸಿದ್ದು ಸ್ವಲ್ಪ ಜೋರಾಗಿಯೇ ಕೇಳಿಸಿತು.

ಆಸನ ವ್ಯವಸ್ಥೆ ಕೂಡ ಕೇಂದ್ರದಲ್ಲಿ ಆಡ­ಳಿತ ಪಕ್ಷ ಬದಲಾಗಿರುವುದನ್ನು ಬಿಂಬಿ­ಸಿತು. 1984ರ ನಂತರ ಇದೇ ಮೊದಲ ಬಾರಿಗೆ ಒಂದೇ ಪಕ್ಷ ಬಹು­ಮತ ಪಡೆದಿದೆ. ಪರಿಣಾಮವಾಗಿ ಸದ­ನದ ಬಹುಪಾಲು ಆಸನಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸಂಸ­ದರೇ ತುಂಬಿದ್ದಾರೆ.

ಪ್ರಧಾನಿ ಮೋದಿ ಅವರ ಪಕ್ಕದಲ್ಲಿ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಕುಳಿತಿದ್ದರು. ಅವರು ಬಿಜೆಪಿ ಸಂಸದೀಯ ಪಕ್ಷದ ಮುಖಂಡರೂ ಹೌದು.

ಅವರ ನಂತರದ ಮುಂದಿನ ಸಾಲಿನಲ್ಲಿ ಮುರಳಿ ಮನೋಹರ ಜೋಶಿ, ರಾಮ್‌ ವಿಲಾಸ್‌ ಪಾಸ್ವಾನ್‌ (ಎಲ್‌ಜೆಪಿ ಮುಖ್ಯಸ್ಥ), ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್‌ ಮತ್ತು ರಾಜನಾಥ್‌ ಸಿಂಗ್‌ ಕುಳಿತಿದ್ದರು. ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್‌ ಗಡ್ಕರಿ ಅವರ ಆಸನ ಎರಡನೇ ಸಾಲಿನಲ್ಲಿತ್ತು.

ಕೊನೆಯ ಸಾಲಿನಲ್ಲಿ ರಾಹುಲ್‌: ಲೋಕ­ಸಭೆಯಲ್ಲಿ ವಿರೋಧ ಪಕ್ಷ ನಾಯಕನಾ­ಗಲು ಇಚ್ಚಿಸದ ರಾಹುಲ್‌ ಗಾಂಧಿ ಅವರು ಬುಧ­­ವಾರ ನಡೆದ 16ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಹಿಂದಿನ ಸಾಲಿನಲ್ಲಿ ಕುಳಿತ್ತಿದ್ದರು.

ಕಾಂಗ್ರೆಸ್‌ ಸಂಸದರಾದ ಅಸ್ರಾರುಲ್‌ ಹಕ್‌ ಮತ್ತು ಶಶಿ ತರೂರ್‌ ಅವ­ರೊಂ­ದಿದೆ ವಿರೋಧ ಪಕ್ಷಕ್ಕೆ ಮೀಸಲಾದ ಒಂಬತ್ತನೇ ಸಾಲಿನಲ್ಲಿ ಆಸೀನರಾಗಿ­ದ್ದರು. ವಿಶೇಷವೆಂದರೆ ಬಿಜೆಪಿಯ ವರುಣ್‌ ಗಾಂಧಿ ಅವರು ಸಹ ಆಡಳಿತ ಪಕ್ಷದ ಕೊನೆ ಸಾಲಿನಲ್ಲಿದ್ದರು.

ಪ್ರತಿಪಕ್ಷದ ಮೊದಲ ಸಾಲಿನಲ್ಲಿ ಲೋಕ­­ಸಭೆ­ಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ­ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಎಂ. ವೀರಪ್ಪ ಮೊಯಿಲಿ ಮತ್ತು ಕೆ.ಎಚ್‌. ಮುನಿ­ಯಪ್ಪ ಕುಳಿತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.