ADVERTISEMENT

ನೂರು ದಿನಗಳಲ್ಲಿ ವಾಪಸ್‌ ತರುವುದಾಗಿ ಹೇಳಿಲ್ಲ: ಕೇಂದ್ರ ಸ್ಪಷ್ಟನೆ

ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 19:30 IST
Last Updated 27 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕ್‌­ಗಳಲ್ಲಿರುವ ಸಾವಿರಾರು ಕೋಟಿ ಕಪ್ಪುಹಣ­ವನ್ನು ನೂರು ದಿನಗಳಲ್ಲಿ ದೇಶಕ್ಕೆ ಮರಳಿ ತರು­ವುದಾಗಿ ತಾನು ಎಂದೂ ಹೇಳಿಯೇ ಇಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ತಿರುಗಿ ಬಿದ್ದಿದೆ.

‘ವಿದೇಶಿ ಬ್ಯಾಂಕ್‌ಗಳಲ್ಲಿರುವ ಎಲ್ಲ ಕಪ್ಪು­ಹಣ­ವನ್ನು ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಮರಳಿ ತರು­ವು­ದಾ­ಗಿ ಹೇಳು­ವಷ್ಟು ಅಪ್ರಬುದ್ಧರು ನಾವಲ್ಲ’ ಎಂದು  ಸಂಸ­ದೀಯ ವ್ಯವಹಾ­ರ­ಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದರು.

ಯಾವ್ಯಾವ ಸಂದರ್ಭಗಳಲ್ಲಿ ‘ನೂರು ದಿನಗಳ’ ಬಗ್ಗೆ ಪ್ರಸ್ತಾಪಿಸಿದ್ದೇವೋ ಆ ಸಂದರ್ಭಗಳಲ್ಲೆಲ್ಲಾ ‘ಕಪ್ಪುಹಣ ತರುವ  ಕ್ರಿಯೆಗೆ ಚಾಲನೆ ನೀಡುತ್ತೇವೆ’ ಎಂಬರ್ಥದ ಹೇಳಿಕೆಗಳನ್ನು ನೀಡಿದ್ದೇವೆ ಎಂದು ಅವರು ಸಮಜಾಯಿಷಿ ನೀಡಿದರು.

ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಕಪ್ಪುಹಣ ಮರಳಿ ತರುವುದಾಗಿ ದೇಶದ ಜನತೆಗೆ ಭರ­ವಸೆ ನೀಡಿದ್ದ ಬಿಜೆಪಿ ಸರ್ಕಾರ  ಆರು ತಿಂಗಳಾ­ದರೂ ಕಪ್ಪು­ಹಣದ ಬಗ್ಗೆ ಏನೂ ಮಾಡುತ್ತಿಲ್ಲವೇಕೆ ಎಂದು ವಿರೋಧ ಪಕ್ಷಗಳು  ಸರ್ಕಾರ­ವನ್ನು ವ್ಯಂಗ್ಯಭರಿತ  ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡವು.

ಆಗ ಮಧ್ಯಪ್ರವೇಶಿಸಿದ  ನಾಯ್ಡು, ‘ಕಪ್ಪುಹಣ ಮರಳಿ ತರಲು ಕಾರ್ಯಪಡೆ­ ರಚಿ­ಸಲಾಗುವುದು’ ಎಂದು ಪಕ್ಷವು ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿತ್ತು ಎಂದರು.

ಹಾಗಾದರೆ ಎಷ್ಟು ದಿನಗಳಲ್ಲಿ ಕಪ್ಪುಹಣ ಮರಳಿ ತರುತ್ತೀರಿ ಎಂದು ಸದನದಲ್ಲಿ ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು. ಕಪ್ಪುಹಣ ತರುವುದಾಗಿ ಜನರ ಮನಸ್ಸಿನಲ್ಲಿ ಸುಳ್ಳು ಕನಸು ಬಿತ್ತಿದ್ದೀರಿ. ಬಿಜೆಪಿ ಸರ್ಕಾರ ಕಪ್ಪುಹಣ ತರುತ್ತದೆ ಎಂದು ಜನತೆ ನಂಬಿ ಕುಳಿತಿದ್ದಾರೆ ಎಂದು ಲೇವಡಿ ಮಾಡಿದವು.

‘ನೀವು ಕಪ್ಪುಹಣ ಬೇಗನೆ ತರದಿದ್ದರೆ ಖಾತೆದಾರರು ತಮ್ಮ ಹಣವನ್ನು ವಾಪಸ್‌ ಪಡೆದು ಬಿಡುತ್ತಾರೆ’ ಎಂದು ಸಮಾಜವಾದಿ ಪಕ್ಷದ ಸಂಸದ ಮುಲಾಯಂ ಸಿಂಗ್‌ ಯಾದವ್‌ ಚುಚ್ಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.