ADVERTISEMENT

ನೋಟು ರದ್ದತಿಯಿಂದ ಭ್ರಷ್ಟಾಚಾರ ನಿರ್ಮೂಲನೆ ಆದರೆ ಮೋದಿಗೆ ಜೈಕಾರ ಕೂಗುವೆ: ಕೇಜ್ರಿವಾಲ್

ಪಿಟಿಐ
Published 5 ಡಿಸೆಂಬರ್ 2016, 7:26 IST
Last Updated 5 ಡಿಸೆಂಬರ್ 2016, 7:26 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದರಿಂದ ದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ಕಷ್ಟಗಳನ್ನು ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ನಿನ್ನೆ  ಫೇಸ್‍ಬುಕ್ ಲೈವ್ ವಿಡಿಯೋ ಮೂಲಕ ಮಾತನಾಡಿದ ಕೇಜ್ರಿವಾಲ್, ನೋಟು ರದ್ದತಿಯಿಂದಾಗಿ ಕಾರ್ಮಿಕರು, ರೈತರು ಮತ್ತು ವ್ಯಾಪಾರಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ ಪ್ರಧಾನಿಯವರು ದಿನವೊಂದಕ್ಕೆ ಹಲವಾರು ಬಾರಿ ಉಡುಪು ಬದಲಿಸುತ್ತಾ ಇದ್ದಾರೆ. ಮೋದಿಯವರೇ, ಜನರಿಗೆ ನೀವು ಹಾಗೆ ಮಾಡಿ ಹೀಗೆ ಮಾಡಿ ಎಂದು ಸಲಹೆ ನೀಡುವ ಮುನ್ನ, ಆ ಬದಲಾಣೆಗಳನ್ನು ನೀವೇ ಅನುಷ್ಠಾನಕ್ಕೆ ತಂದುಕೊಳ್ಳಿ ಎಂದು ಸಲಹೆ ನೀಡಿದ್ದರು.

ಸೋಮವಾರ ಭಾವ್ನಾದಲ್ಲಿ ವ್ಯಾಪಾರಿಗಳನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮೋದಿಯವರ ಸ್ವಚ್ಛ ಭಾರತ ಅಭಿಯಾನ, ಯೋಗ ದಿನ ಮೊದಲಾದ ಉತ್ತಮ ಕಾರ್ಯಗಳಿಗೆ ನಾನೂ ಬೆಂಬಲ ನೀಡಿದ್ದೇನೆ.

ADVERTISEMENT

ಒಂದು ವೇಳೆ ನೋಟು ರದ್ದತಿಯಿಂದಾಗಿ ದೇಶದಲ್ಲಿರುವ ಕಪ್ಪು ಹಣ ಮತ್ತು ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ ಎಂದಾದರೆ ನಾನು ಮೋದಿ ಮೋದಿ ಎಂದು ಜೈಕಾರ ಕೂಗಲು ಸಿದ್ಧ ಎಂದಿದ್ದಾರೆ.

ಅಣ್ಣಾ ಹಜಾರೆಯವರು ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭಿಸಿದಾಗ ನಾವು ನಮ್ಮ ಜೀವನವನ್ನು ಪಣಕ್ಕಿಟ್ಟಿದ್ದೇವೆ. ಸ್ವಚ್ಛ ಭಾರತ ಅಭಿಯಾನ, ಯೋಗ ದಿನ ಮತ್ತು ನಿರ್ದಿಷ್ಟ ದಾಳಿ ನಡೆಸಿದಾಗ ನಾವು ಮೋದಿಯವರ ನಡೆಯನ್ನು ಬೆಂಬಲಿಸಿದ್ದೆವು. ಆದರೆ ನೋಟು ರದ್ದತಿ ಮಾಡುವ ಮೂಲಕ ಪ್ರಧಾನಿ ತಪ್ಪು ಮಾಡಿದ್ದಾರೆ. ಆದ್ದರಿಂದ ನಾವು ಅದನ್ನು ವಿರೋಧಿಸುತ್ತೇವೆ.

ನೋಟು ರದ್ದತಿಯಿಂದಾಗಿ ದೇಶದಲ್ಲಿ ಸಮಸ್ಯೆಯುಂಟಾಗಿದೆ. ಈ ಮೂಲಕ ಬಿಜೆಪಿ ದೇಶದ ಆರ್ಥಿಕತೆಯನ್ನೇ ನಾಶ  ಮಾಡುತ್ತದೆ. ಅತೀ ಹೆಚ್ಚು ಸಾಲ ಹೊಂದಿರುವ ತಮ್ಮ ಕಾರ್ಪೊರೇಟ್  ಗೆಳೆಯರಿಗೆ ಸಹಾಯ ಮಾಡುವುದಕ್ಕಾಗಿ ಮೋದಿ ನೋಟು ರದ್ದತಿಯನ್ನು ಜಾರಿಗೆ ತಂದಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ನೋಟು ರದ್ದತಿಯಿಂದುಂಟಾಗಿರುವ ಸಮಸ್ಯೆ 50 ದಿನಗಳಲ್ಲಿ ಬಗೆ ಹರಿಯುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಜೇಟ್ಲಿ ಅವರು 6 ತಿಂಗಳ ಕಾಲಾವಕಾಶ ಬೇಕು ಎನ್ನುತ್ತಿದ್ದಾರೆ. ಮೋದಿ ಮತ್ತು ಜೇಟ್ಲಿ ಇವರಿಬ್ಬರಿಗೂ ಈ ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಎಂಬುದೇ ಗೊತ್ತಿಲ್ಲ.

ಭಿಕ್ಷುಕರು ಕೂಡಾ ಸ್ವೈಪ್  ಮೆಷಿನ್ ಬಳಸುತ್ತಿದ್ದಾರೆ ಎಂಬ ಮೋದಿ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡ ಕೇಜ್ರಿವಾಲ್, ಬಿಜೆಪಿ ಶೇ. 80ರಷ್ಟು ದೇಣಿಗೆಯನ್ನು ನಗದು ಮೂಲಕ ಸ್ವೀಕರಿಸುತ್ತದೆ. ಪ್ರಧಾನಿ ಇದನ್ನು ನಿಲ್ಲಿಸಬೇಕು. ಆಮ್ ಆದ್ಮಿ ಪಕ್ಷಕ್ಕೆ ಬರುವ ದೇಣಿಗೆಗಳು ಚೆಕ್ ಮತ್ತು ಇನ್ನಿತರ ಮೂಲಗಳ ಮೂಲಕ ಬರುತ್ತಿದೆ. ಮೋದಿಯವರು ₹2.5 ಲಕ್ಷದಲ್ಲಿ ಮದುವೆ ಮಾಡಬೇಕು ಎಂದು ಹೇಳುತ್ತಿದ್ದಾರೆ.ಆದರೆ ಅವರ ಸಚಿವರ, ಸಂಸದರ, ಗೆಳೆಯರ ಮಕ್ಕಳ ಮದುವೆಗೆ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ.

ಇದು ಯಾವ ನ್ಯಾಯ? ಮೋದಿಯವರು ಇನ್ನೊಬ್ಬರಿಗೆ ಉಪದೇಶ ನೀಡುವ ಮುನ್ನ ತಮ್ಮ ಪಕ್ಷದವರಲ್ಲಿ ಆ ಉಪದೇಶವನ್ನು ಪಾಲಿಸಲು ಹೇಳಲಿ. ಇನ್ನೊಬ್ಬರಿಗೆ ಸಲಹೆ ನೀಡುವ ಮುನ್ನ ತಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲಿ. ಹಾಗಿದ್ದರೆ ಮಾತ್ರ ಅವರ ಮಾತಿಗೆ ಬೆಲೆಯಿರುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.