ADVERTISEMENT

ನ್ಯಾಯಾಂಗ ಆಯೋಗ ರಚನೆ ನಿರ್ಧಾರ ರದ್ದು ಸಾಧ್ಯತೆ

ಯುವತಿಯ ಮೇಲೆ ಅಕ್ರಮ ಕಣ್ಗಾವಲು ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ನವದೆಹಲಿ (ಪಿಟಿಐ): ಅಕ್ರಮ ಕಣ್ಗಾ­ವಲು ಪ್ರಕರಣದ ಬಗ್ಗೆ ತನಿಖೆ ನಡೆಸುವ ಹಿಂದಿನ ಯುಪಿಎ ಸರ್ಕಾರದ ವಿವಾದಾ­ತ್ಮಕ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ರದ್ದುಪಡಿಸುವ ಸಾಧ್ಯತೆ ಇದೆ.

ಗುಜರಾತ್‌ನಲ್ಲಿ 2009ರಲ್ಲಿ ಯುವತಿಯೊಬ್ಬರ ಮೇಲೆ ಕಣ್ಗಾವಲು ನಡೆಸಿದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಕಳೆದ ಡಿಸೆಂಬರ್‌ 26ರಂದು ನ್ಯಾಯಾಂಗ ಆಯೋಗವನ್ನು ರಚಿಸಲು ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ಗೃಹ ಸಚಿವಾ­ಲ­ಯವು ಕೇಂದ್ರ ಸಂಪುಟಕ್ಕೆ ಟಿಪ್ಪಣಿ ಸಲ್ಲಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನ್ಯಾಯಾಂಗ ಆಯೋಗ ರಚಿಸುವ ‘ರಾಜಕೀಯ ದುರುದ್ದೇಶ’ದ ನಿರ್ಧಾರವನ್ನು ಎನ್‌ಡಿಎ ಸರ್ಕಾರ ಮರುಪರಿಶೀಲನೆ ನಡೆಸಲಿದೆ ಎಂದು ಹಿಂದೆಯೇ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ಹೇಳಿದ್ದರು.

ಹಿಂದಿನ ಮನಮೋಹನ್‌ ಸಿಂಗ್‌ ಸರ್ಕಾರದ ಆಯೋಗ ರಚನೆಯ ನಿರ್ಧಾರ­ವನ್ನು ಬಿಜೆಪಿ ಬಲವಾಗಿ ವಿರೋಧಿಸಿತ್ತು. ಗುಜರಾತ್‌ ಸರ್ಕಾರ ನ್ಯಾಯಾಂಗ ತನಿಖೆಗೆ ಆಯೋಗವನ್ನು ನೇಮಿಸಿರುವಾಗ ಕೇಂದ್ರ ಸರ್ಕಾರ ಮತ್ತೊಂದು ಆಯೋಗವನ್ನು ನೇಮಿ­ಸುವುದು ಅನಗತ್ಯ ಎಂದು ಬಿಜೆಪಿ ವಾದಿಸಿತ್ತು.

ಗುಜರಾತ್‌ನ ಮುಖ್ಯಮಂತ್ರಿ­ಯಾ­ಗಿದ್ದ ನರೇಂದ್ರ ಮೋದಿ ಅವರು ಅಕ್ರಮ ಕಣ್ಗಾವಲು ಪ್ರಕರಣದಲ್ಲಿ ಭಾಗಿ­ಯಾಗಿದ್ದಾರೆ ಎಂಬ ಆರೋಪ­ದಿಂ­ದಾಗಿ ಆಯೋಗ ನೇಮಕದ ಕೇಂದ್ರದ ನಿರ್ಧಾರ ರಾಜಕೀಯ ವಿವಾದದ ಸ್ವರೂಪ ಪಡೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.