ADVERTISEMENT

ನ್ಯಾಯಾಧೀಶರಿಗೆ ₹100 ಕೋಟಿ ಲಂಚದ ಆಮಿಷ ಆರೋಪ

ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಮತ್ತೆ ಷಾ ಹೆಸರು ಪ್ರಸ್ತಾಪ

ಪಿಟಿಐ
Published 23 ನವೆಂಬರ್ 2017, 20:26 IST
Last Updated 23 ನವೆಂಬರ್ 2017, 20:26 IST
ಅಮಿತ್‌ ಷಾ
ಅಮಿತ್‌ ಷಾ   

ನವದೆಹಲಿ: ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಪಿ. ಲೋಯ ಸಾವಿನ ಪ್ರಕರಣ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

2005ರಲ್ಲಿ ನಡೆದ ಸೊಹ್ರಾಬುದ್ದೀನ್‌ ಷಾ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ 2014ರಲ್ಲಿ ಲೋಯ ಅವರು ಮೃತಪಟ್ಟಿದ್ದರು. ಲೋಯ ಸಾವಿನ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಸಿಪಿಎಂ ಒತ್ತಾಯಿಸಿದೆ.

ಲೋಯ ಅವರ ಸಾವಿನಲ್ಲಿ ಹಲವು ಅಹಸಜ ವಿಚಾರಗಳು ಇವೆ ಎಂದು ಮಾಧ್ಯಮದಲ್ಲಿ ಇತ್ತೀಚೆಗೆ ವರದಿಯಾಗಿದೆ ಎಂದು ಸಿಪಿಎಂ ಹೇಳಿದೆ.

ADVERTISEMENT

ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಸೊಹ್ರಾಬುದ್ದೀನ್‌ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು.

‘ಪ್ರಕರಣದಲ್ಲಿ ಷಾ ಅವರಿಗೆ ಅನುಕೂಲಕರವಾಗಿ ಆದೇಶ ನೀಡಿದರೆ ₹100 ಕೋಟಿ ನೀಡುವ ಆಮಿಷ  ಒಡ್ಡಲಾಗಿತ್ತು ಎಂದು ಲೋಯ ಅವರ ಸಹೋದರಿ ಅನುರಾಧಾ ಬಿಯಾನಿ ಹೇಳಿದ್ದಾರೆ’ ಎಂದು ದಿ ಕ್ಯಾರವಾನ್‌ ಪತ್ರಿಕೆ ವರದಿ ಮಾಡಿದೆ. ‘ಬಾಂಬೆ ಹೈಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿ ಈ ಆಮಿಷ ಒಡ್ಡಿದ್ದರು ಎಂದು ಬಿಯಾನಿ ಹೇಳಿದ್ದಾರೆ’ ಎಂದು ‘ಕ್ಯಾರವಾನ್‌’ನ ವರದಿಯಲ್ಲಿ ಇದೆ.

‘ಲೋಯ ಅವರು ಸಾಯುವುದಕ್ಕೆ ಕೆಲವು ದಿನ ಮೊದಲು ಘಾಟೆಗಾಂವ್‌ನ ಕುಟುಂಬದ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸುವುದಕ್ಕಾಗಿ ಎಲ್ಲರೂ ಸೇರಿದ್ದೆವು. ಆ ಸಂದರ್ಭದಲ್ಲಿ ಈ ಆಮಿಷದ ಬಗ್ಗೆ ನನಗೆ ಲೋಯ ತಿಳಿಸಿದ್ದರು’ ಎಂದು ಬಿಯಾನಿ ಹೇಳಿದ್ದಾಗಿ ಕ್ಯಾರವಾನ್‌ ಬರೆದಿದೆ. ‘ಅನುಕೂಲಕರ ಆದೇಶ ಕೊಟ್ಟರೆ ಹಣ ಮತ್ತು ಮುಂಬೈಯಲ್ಲಿ ಮನೆ ಕೊಡಿಸುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ಲೋಯ ತಮ್ಮಲ್ಲಿ ಹೇಳಿದ್ದರು’ ಎಂದು ಅವರ ತಂದೆ ಹರ್‌ಕಿಶನ್‌ ಮಾಹಿನಿ ನೀಡಿದ್ದಾಗಿಯೂ ಈ ವರದಿಯಲ್ಲಿ ಇದೆ.

ಕೊಲೆ, ಲಂಚ, ಕಾನೂನಿನ ಬುಡಮೇಲು, ಅತ್ಯುನ್ನತ ಹಂತದಲ್ಲಿ ಪ್ರಜಾತಂತ್ರದ ಸಂಸ್ಥೆಗಳ ದುರ್ಬಳಕೆ ಸೇರಿ ಹಲವು ಆತಂಕಕಾರಿ ಪ್ರಶ್ನೆಗಳನ್ನು ಈ ಪ್ರಕರಣವು ಎತ್ತಿದೆ ಎಂದು ಸಿಪಿಎಂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.