ADVERTISEMENT

ಪಠ್ಯಪುಸ್ತಕ ಪ್ರಕಟಣೆ ಸ್ಥಗಿತಕ್ಕೆ ಸೂಚನೆ

ಏಜೆನ್ಸೀಸ್
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST

ನವದೆಹಲಿ: ಪಠ್ಯಪುಸ್ತಕ ಪ್ರಕಟಿಸುವುದನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕೇಂದ್ರೀಯ ಪೌಢಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಸೂಚಿಸಿದೆ.

ಪರೀಕ್ಷೆಗಳನ್ನು ಸುಗಮವಾಗಿ ನಡೆಸುವುದು, ಪ್ರಮಾಣಪತ್ರ   ನೀಡುವುದು ಹಾಗೂ ಶಾಲೆಗಳಿಗೆ ಮಾನ್ಯತೆ ನೀಡುವುದು ಸಿಬಿಎಸ್‌ಇ ಪ್ರಮುಖ ಕಾರ್ಯ. ಈ ಕಾರ್ಯಗಳ ಬಗ್ಗೆ ಮಾತ್ರ ಹೆಚ್ಚು ಗಮನ ನೀಡಬೇಕು ಎಂದು ಸಚಿವಾಲಯ ತಿಳಿಸಿದೆ.

ಇನ್ನು ಮುಂದೆ ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಮಾತ್ರ ಎಲ್ಲ  ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುತ್ತದೆ. ಇದು ಸಿಬಿಎಸ್‌ಇಯಿಂದ ಮಾನ್ಯತೆ ಪಡೆದ ಶಾಲೆಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದೆ. ‘ಜೂನ್‌ 5ರಂದು ನಡೆದ ಸಿಬಿಎಸ್‌ಇ ಮತ್ತು ಎನ್‌ಸಿಇಆರ್‌ಟಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಉಪೇಂದ್ರ ಕುಶವಾಹ ಗುರುವಾರ ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.

ADVERTISEMENT

ಕನ್ನಡ ಧ್ವಜ: ಶಿವಸೇನಾ ಆಕ್ಷೇಪ
ಮುಂಬೈ: ಪ್ರತ್ಯೇಕ ಧ್ವಜ ರೂಪಿಸುತ್ತಿರುವ ಕರ್ನಾಟಕ ಸರ್ಕಾರದ ಧೋರಣೆಗೆ ಶಿವಸೇನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಮತ್ತು ಇತಿಹಾಸದ ವಿರುದ್ಧ ನಡೆದಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಜಾಗೊಳಿಸಬೇಕೆಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದೆ.

ಕೇಂದ್ರ ಸರ್ಕಾರ ಸಹ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ಎಲ್ಲ ರೀತಿಯ ಅನುದಾನವನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದೆ.

‘ಪ್ರತ್ಯೇಕ ಧ್ವಜ ರೂಪಿಸಲು ಮುಂದಾಗಿರುವ ಕರ್ನಾಟಕದಲ್ಲಿನ ಕಾಂಗ್ರೆಸ್‌ ಸರ್ಕಾರದ ಕ್ರಮ ಅಸಾಂವಿಧಾನಿಕ ಮತ್ತು  ಹೇಯ ಕೃತ್ಯವಾಗಿದೆ. ಇದು ದೇಶದ್ರೋಹದ ಕೆಲಸ. ಇದರಿಂದ ರಾಷ್ಟ್ರೀಯ ಧ್ವಜ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ದೇಶಕ್ಕಾಗಿ ತ್ಯಾಗ ಮಾಡಿರುವ ಯೋಧರಿಗೆ   ಅವಮಾನ ಮಾಡಿದಂತಾಗುತ್ತದೆ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬರೆಯಲಾಗಿದೆ.


ಶಾರೂಖ್‌ ವಿರುದ್ಧದ ವಿಚಾರಣೆಗೆ ತಡೆ
ಅಹಮದಾಬಾದ್‌: ಚಲನಚಿತ್ರ ನಟ ಶಾರೂಖ್‌ ಖಾನ್‌ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ವಿಚಾರಣೆಗೆ ಗುಜರಾತ್‌ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

‘ರಯಿಸ್‌’ ಚಲನಚಿತ್ರ ಪ್ರಚಾರದ ಸಂದರ್ಭದಲ್ಲಿ ವಡೋದರಾ ರೈಲ್ವೆ ನಿಲ್ದಾಣದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರೂಖ್‌ ಖಾನ್‌ ಕ್ರಿಮಿನಲ್‌ ವಿಚಾರಣೆ ಎದುರಿಸುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಡೋದರಾ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೂ ತಡೆ ನೀಡಲಾಗಿದೆ.

‘ನಿರ್ಬಂಧ ಹಕ್ಕು ವಿಮಾನ ಯಾನ ಸಂಸ್ಥೆಗೆ ಇಲ್ಲ’
ನವದೆಹಲಿ:
ಸಂಸದರೂ ಸೇರಿದಂತೆ ಯಾವುದೇ ನಾಗರಿಕರಿಗೆ ಪ್ರಯಾಣ ನಿಷೇಧ ಹೇರಲು ವಿಮಾನಯಾನ ಸಂಸ್ಥೆಗಳಿಗೆ ಅಧಿಕಾರವಿಲ್ಲ ಎಂದು ರಾಜ್ಯಸಭೆಯ ಉಪ ಸಭಾಪತಿ ಪಿ. ಜೆ. ಕುರಿಯನ್ ಗುರುವಾರ ಸ್ಪಷ್ಟಪಡಿಸಿದರು.

ಏರ್ ಇಂಡಿಯಾ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಇತ್ತೀಚೆಗೆ ಕೆಲವು ಪ್ರಯಾಣಿಕರಿಗೆ ನಿಷೇಧ ಹೇರಿರುವುದನ್ನು ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗರ್‌ವಾಲ್ ಅವರು, ವಿಮಾನಯಾನ ಸಂಸ್ಥೆಗಳ ನಿಷೇಧ ಕ್ರಮವು ಸಂಸದರ ಹಕ್ಕುಚ್ಯುತಿ ಆಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.