ADVERTISEMENT

ಪತ್ನಿ ಜತೆಗಿನ ಲೈಂಗಿಕ ಕ್ರಿಯೆ ನೇರಪ್ರಸಾರ

ಹೈದರಾಬಾದ್: ಪೊಲೀಸರ ಅತಿಥಿಯಾದ ಟೆಕಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 19:30 IST
Last Updated 13 ಏಪ್ರಿಲ್ 2017, 19:30 IST
ಹೈದರಾಬಾದ್: ಪತ್ನಿಯ ಜತೆ ನಡೆಸಿದ ಲೈಂಗಿಕ ಕ್ರಿಯೆಯನ್ನು ಹಣಕ್ಕಾಗಿ ನೀಲಿಚಿತ್ರಗಳ ವೀಕ್ಷಕರ  ಆನ್‌ಲೈನ್‌ ಕ್ಲಬ್‌ನಲ್ಲಿ ನೇರಪ್ರಸಾರ ಮಾಡಿದ್ದ ಇಲ್ಲಿನ ಟೆಕಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
 
‘ಕಳೆದ ನವೆಂಬರ್‌ನಲ್ಲಿ ‘ನಾನು ಮತ್ತು ಪತಿ ಏಕಾಂತದಲ್ಲಿ ಇದ್ದದನ್ನು ಯಾರೋ ಚಿತ್ರೀಕರಿಸಿ, ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ’ ಎಂದು  ಮಹಿಳೆಯೊಬ್ಬರು ದೂರು ನೀಡಿದ್ದರು. ಆ ವಿಡಿಯೊವನ್ನು ಕೇರಳದ ತ್ರಿಶೂರ್‌ನಿಂದ ಅಂತರ್ಜಾಲಕ್ಕೆ ಅಪ್‌ಲೋಡ್‌ ಮಾಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಯಿತು’ ಎಂದು ಸೈಬರ್‌ ಪೊಲೀಸರು ಮಾಹಿತಿ ನೀಡಿದ್ದಾರೆ.
 
‘ಲೈಂಗಿಕ ಕ್ರಿಯೆಗಳ ನೇರಪ್ರಸಾರ ವೀಕ್ಷಣೆಗೆಂದೇ ರೂಪಿಸಿಕೊಂಡಿರುವ ಆನ್‌ಲೈನ್‌ ಕ್ಲಬ್‌ ಒಂದರ ಸದಸ್ಯರು ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದಾರೆ ಎಂಬುದು ತಿಳಿಯಿತು. ಈ ಕ್ಲಬ್‌ನ ಸದಸ್ಯತ್ವ ಪಡೆಯಲು ದುಬಾರಿ ಶುಲ್ಕ ತೆರಬೇಕು. ಜತೆಗೆ, ಲೈಂಗಿಕ ಕ್ರಿಯೆಯ ನೇರಪ್ರಸಾರ ಒದಗಿಸುವವರಿಗೆ ಕ್ಲಬ್‌ ಭಾರಿ ಮೊತ್ತವನ್ನು ಪಾವತಿಸುತ್ತದೆ’ ಎಂದು ಅವರು ವಿವರಿಸಿದ್ದಾರೆ.
 
‘ಆ ವಿಡಿಯೊದಲ್ಲಿ ಮಹಿಳೆಯನ್ನು ಮಾತ್ರ ಕೇಂದ್ರೀಕರಿಸಲಾಗಿತ್ತು. ಆದರೆ, ಮಹಿಳೆಯ ಪತಿಯತ್ತ ಕ್ಯಾಮೆರಾ ಒಮ್ಮೆಯೂ ತಿರುಗಿಲ್ಲ. ಅಂದಮೇಲೆ, ಚಿತ್ರೀಕರಣವನ್ನು ಬೇರೆ ವ್ಯಕ್ತಿಗಳು ಮಾಡಿರುವ ಸಾಧ್ಯತೆ ಇರಲಿಲ್ಲ. ನಂತರ ಈ ಬಗ್ಗೆ  ಮಹಿಳೆಯ ಪತಿಯನ್ನು ವಿಚಾರಿಸಿದಾಗ,  ಲೈಂಗಿಕ ಕ್ರಿಯೆಯನ್ನು ನೇರಪ್ರಸಾರ ಮಾಡಿದ್ದನ್ನು ಆತ ಒಪ್ಪಿಕೊಂಡ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
‘ಆರೋಪಿ ಲೈಂಗಿಕ ಕ್ರಿಯೆ ನಡೆಸುವ ವೇಳೆ ತನ್ನ ಲ್ಯಾಪ್‌ಟಾಪ್‌ನ ಕ್ಯಾಮೆರಾ ಆನ್‌ ಮಾಡಿ, ನೇರ ಪ್ರಸಾರ ಮಾಡಿದ್ದಾನೆ. ಪತ್ನಿಯ ಗಮನಕ್ಕೆ ಇದು ಬಾರದಂತೆ  ನೋಡಿಕೊಳ್ಳುವ ಸಲುವಾಗಿ, ಲ್ಯಾಪ್‌ಟಾಪ್‌ನಲ್ಲಿ ಬೇರೆ ನೀಲಿಚಿತ್ರವನ್ನು ಹಾಕಿದ್ದ. ಆರೋಪಿ ನೇರಪ್ರಸಾರ ಮಾಡಿದ್ದ ವಿಡಿಯೊವನ್ನು ಕ್ಲಬ್‌ನ ಕೆಲವು ಸದಸ್ಯರು ದಾಖಲಿಸಿಕೊಂಡು, ಬೇರೆ ನೀಲಿಚಿತ್ರಗಳ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
 
‘ಆರೋಪಿಗೆ ನೀಲಿಚಿತ್ರಗಳನ್ನು ವೀಕ್ಷಿಸುವ ಚಟವಿತ್ತು. ಆತ ನೀಲಿ ಚಿತ್ರ ವೀಕ್ಷಕರ  ಆನ್‌ಲೈನ್‌ ಕ್ಲಬ್‌ನ ಸದಸ್ಯನೂ ಆಗಿದ್ದ. ಸುಮಾರು 3,000 ಸದಸ್ಯರಿರುವ ಈ ಕ್ಲಬ್‌ನಿಂದ ಆರೋಪಿಗೆ ಈ ಹಿಂದೆಯೂ ಹಣ ಪಾವತಿ ಆಗಿದೆ.

ಹೀಗಾಗಿ ಆತನ ಬ್ಯಾಂಕ್‌ ಖಾತೆಯನ್ನು ಪರಿಶೀಲಿಸಲಾಗುತ್ತಿದೆ. ಈ ಹಿಂದೆ ಪುರುಷ ವೇಶ್ಯೆಯಾಗಿ ಸೇವೆ ನೀಡುವುದಾಗಿಯೂ, ಆತ ಬೇರೆ ಕ್ಲಬ್‌ ಒಂದರಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದ. ಅದು ಆತನ ಪತ್ನಿಯ ಗಮನಕ್ಕೆ ಬಂದ ನಂತರ ನೋಂದಣಿ ರದ್ದು ಮಾಡಿದ್ದ’ ಎಂದು ಪೊಲೀಸರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.