ADVERTISEMENT

ಪತ್ರಕರ್ತೆ ಮೇಲೆ ಸ್ನೇಹಿತನಿಂದ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2014, 19:30 IST
Last Updated 5 ಜೂನ್ 2014, 19:30 IST

ಮುಂಬೈ: ಮರಾಠಿ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತೆಯಾಗಿದ್ದ ಯುವತಿ ಮೇಲೆ ಆಕೆಯ ಗೆಳೆಯನೇ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಆರೋಪಿ 30 ವರ್ಷದ ಕಪಿಲ್‌ ಜಯಪ್ರಕಾಶ್‌ ಇಂಗೋಲ್‌ ಕೂಡ  ಮಾಧ್ಯಮ ಸಂಸ್ಥೆಯೊಂದರಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದ. ಯುವತಿ ಠಾಣೆಗೆ ದೂರು ನೀಡಿದ ವಿಷಯ ತಿಳಿದು  ಕಪಿಲ್‌ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಕಾರ, ಅತ್ಯಾಚಾರಕ್ಕೊಳಗಾದ 28 ವರ್ಷದ ಯುವತಿಯು ಕಳೆದ ವರ್ಷ ಯುವಕನೊಂದಿಗೆ ಸ್ನೇಹ ಬೆಳೆಸಿದ್ದಳು.
‘ಪರಭಾನಿಯ ಕಪಿಲ್‌, ಪರೇಲ್‌ನಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ಉಳಿದುಕೊಂಡಿದ್ದ. ಬಳಿಕ ಆತ ಪಾರ್ಕ್‌ಸೈಟ್‌ ಪ್ರದೇಶಕ್ಕೆ ತನ್ನ ವಾಸ ಬದಲಿಸಿದ್ದ’ ಎಂದು ಗೊರಯ್‌ ಪೊಲೀಸ್‌ ಠಾಣೆ ಇನ್ಸಪೆಕ್ಟರ್‌ ಜೆ.ಪಿ. ಪಾಟೀಲ್‌ ತಿಳಿಸಿದ್ದಾರೆ.

‘ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದ ಕಪಿಲ್‌, ಕಳೆದ ವರ್ಷ  ಗೊರಯ್‌ ಉಪನಗರದ ರೆಸಾರ್ಟ್‌ವೊಂದರಲ್ಲಿ ಅವರ ಮೇಲೆ ಅತ್ಯಾಚಾರ ನಡೆಸಿದ್ದ. ಬಳಿಕ ವಿಖ್ರೊಲಿ ಉಪನಗರದಲ್ಲಿ ಕುಟುಂಬದವರೊಂದಿಗೆ ಯುವತಿ ವಾಸವಾಗಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಕಪಿಲ್‌ ಕೂಡ ಬಾಡಿಗೆ ಪಡೆದು ಯುವತಿಯೊಂದಿಗೆ ಸಂಬಂಧ ಮುಂದುವರಿಸಿದ್ದ. ಕೆಲ ದಿನಗಳ ನಂತರ ಕಪಿಲ್ ವಿವಾಹವಾಗಲು ನಿರಾಕರಿಸಿದ್ದಾನೆ. ಯುವತಿ, ವಿಷಯವನ್ನು ತಾಯಿಗೆ ವಿವರಿಸಿದ್ದಾರೆ. ಯುವತಿ ನೀಡಿದ ದೂರಿನ ಮೇರೆಗೆ ಪಾರ್ಕ್‌ಸೈಟ್‌ ಪೊಲೀಸರು ಮೇ 15ರಂದು ಪ್ರಕರಣ ದಾಖಲಿಸಿಕೊಂಡು ನಂತರ ಅದನ್ನು ಗೊರಯ್‌ ಪೊಲೀಸರಿಗೆ ವರ್ಗ ಮಾಡಿದ್ದಾರೆ’ ಎಂದು  ವಿವರಿಸಿದ್ದಾರೆ.

ಎಫ್‌ಐಆರ್‌ ದಾಖಲಾಗಿರುವ  ಕಾರಣ ದಿಂಡೋಷಿ ಉಪನಗರದ ಸೆಷನ್ಸ್‌ ಕೋರ್ಟ್‌ನಲ್ಲಿ ಕಪಿಲ್‌ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇದೀಗ ಕಪಿಲ್‌, ಬಾಂಬೆ ಹೈಕೋರ್ಟ್‌ ಕದ ತಟ್ಟಿದ್ದು, ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.