ADVERTISEMENT

‘ಪದ್ಮಾವತಿ’ಗೆ ತಡೆ ನೀಡದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 19:30 IST
Last Updated 10 ನವೆಂಬರ್ 2017, 19:30 IST

ನವದೆಹಲಿ/ ಲಖನೌ (ಪಿಟಿಐ): ‘ಪದ್ಮಾವತಿ’ ಸಿನಿಮಾ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿನಿಮಾವನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಅಲಹಾಬಾದ್‌ ಹೈಕೋರ್ಟ್ ನಿರಾಕರಿಸಿದೆ.

ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ, ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ಮತ್ತು ಶಾಹಿದ್‌ ಕಪೂರ್‌ ನಟಿಸಿರುವ ಸಿನಿಮಾ ಡಿ. 1ರಂದು ಬಿಡುಗಡೆಗೆ ನಿಗದಿಯಾಗಿದೆ.

‘ಈ ಸಿನಿಮಾವನ್ನು ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಸಲ್ಲಿಸಲಾಗಿದೆಯೇ, ಮಂಡಳಿ ಪ್ರಮಾಣಪತ್ರ ನೀಡಿದೆಯೇ’ ಎಂದು ವಿಚಾರಣೆಯ ಆರಂಭದಲ್ಲಿಯೇ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಪ್ರಶ್ನಿಸಿತು. ಮಂಡಳಿಯ ಪ್ರಮಾಣಪತ್ರ ಸಿಕ್ಕಿರುವ ಸಿನಿಮಾ ಬಿಡುಗಡೆ ತಡೆಯುವುದು ಸಾಧ್ಯವಿಲ್ಲ ಎಂದು ಹೇಳಿತು.

ADVERTISEMENT

ಸಿನಿಮಾ ನೋಡಲು ತಜ್ಞರ ಸಮಿತಿ

ಪದ್ಮಾವತಿ ಸಿನಿಮಾವನ್ನು ನೋಡಿ, ಅದು ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿದೆಯೇ ಎಂಬುದನ್ನು ನಿರ್ಧರಿಸಲು ಉನ್ನತಾಧಿಕಾರ ಸಮಿತಿ ರಚಿಸುವುದಾಗಿ ರಾಜಸ್ಥಾನ ಸರ್ಕಾರ ಹೇಳಿದೆ.

ಜನರ ಭಾವನೆಗಳಿಗೆ ಧಕ್ಕೆಯಾಗುವ ದೃಶ್ಯಗಳು ಸಿನಿಮಾದಲ್ಲಿ ಇದ್ದರೆ ಅಂತಹ ದೃಶ್ಯಗಳನ್ನು ಕತ್ತರಿಸುವಂತೆ ನಿರ್ದೇಶಕ ಬನ್ಸಾಲಿ ಅವರಿಗೆ ಸಮಿತಿಯು ಸೂಚಿಸಲಿದೆ ಎಂದು ರಾಜಸ್ಥಾನದ ಗೃಹ ಸಚಿವ ಗುಲಾಬ್‌ ಚಂದ್‌ ಕಟಾರಿಯಾ ತಿಳಿಸಿದ್ದಾರೆ.

‘ರಾಣಿ ಪದ್ಮಾವತಿಯ ಘನತೆಗೆ ಕುಂದುಂಟಾಗಲು ನಾವು ಅವಕಾಶ ಕೊಡುವುದಿಲ್ಲ’ ಎಂದು ಕಟಾರಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.