ADVERTISEMENT

‘ಪದ್ಮಾವತಿ’ಗೆ ಸಂತರ ವಿರೋಧ

ನಿರ್ಮಾಪಕ, ನಿರ್ದೇಶಕರನ್ನು ಜೈಲಿಗೆ ತಳ್ಳಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
‘ಪದ್ಮಾವತಿ’ಗೆ ಸಂತರ ವಿರೋಧ
‘ಪದ್ಮಾವತಿ’ಗೆ ಸಂತರ ವಿರೋಧ   

ಲಖನೌ: ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಸಿನಿಮಾ ‘ಪದ್ಮಾವತಿ’ಯನ್ನು ನಿಷೇಧಿಸಬೇಕು ಎಂಬ ಕೂಗಿಗೆ ಹಿಂದೂ ಸಂತರೂ ಧ್ವನಿಗೂಡಿಸಿದ್ದಾರೆ. ಇತಿಹಾಸದ ತಿರುಚುವಿಕೆಯನ್ನು ಸಹಿಸಲಾಗದು ಎಂದು ಹೇಳಿರುವ ಕೆಲವು ಸಂತರು, ಸಿನಿಮಾದ ನಿರ್ಮಾಪಕ, ನಿರ್ದೇಶಕ ಮತ್ತು ನಟ, ನಟಿಯರ ವಿರುದ್ಧ ದೇಶದ್ರೋಹದ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇತಿಹಾಸದ ತಿರುಚುವಿಕೆಯನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ’ ಎಂದು ಅಖಿಲ ಭಾರತ ಅಖಾಡ ಪರಿಷತ್‌ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಹೇಳಿದ್ದಾರೆ. ಸಿನಿಮಾ ಬಿಡುಗಡೆ ಮಾಡಬಾರದು ಎಂದು ದೇಶದ ಕೆಲವೆಡೆ ನಡೆಯುತ್ತಿರುವ ಹೋರಾಟವನ್ನು ಗಿರಿ ಅವರು ಸಮರ್ಥಿಸಿಕೊಂಡಿದ್ದಾರೆ. ‘ಪದ್ಮಾವತಿ’ಯ ನಿರ್ಮಾಪಕ, ನಿರ್ದೇಶಕ ಮತ್ತು ನಟ–ನಟಿಯರನ್ನು ಸೆರೆಮನೆಗೆ ತಳ್ಳಬೇಕು ಎಂದು ಅವರು ಹೇಳಿದ್ದಾರೆ.

ಸಿನಿಮಾದ ವಿರುದ್ಧ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ. ಉತ್ತರ ಪ್ರದೇಶದ ಹಾಪುರ ಪಟ್ಟಣದ ಸಿನಿಮಾ ಮಂದಿರದ ಮುಂದೆ ಪ್ರತಿಭಟನೆ ನಡೆಸಿದ ಗುಂಪೊಂದು, ಸಿನಿಮಾ ಪ್ರದರ್ಶಿಸದಂತೆ ಎಚ್ಚರಿಕೆ ನೀಡಿದೆ.

ADVERTISEMENT

‘ಸುಪ್ರೀಂ’ಗೆ ಮತ್ತೊಂದು ಅರ್ಜಿ: ಪದ್ಮಾವತಿ ಸಿನಿಮಾದಲ್ಲಿರುವ ‘ಆಕ್ಷೇಪಾರ್ಹ’ ದೃಶ್ಯಗಳನ್ನು ಕತ್ತರಿಸಬೇಕು ಮತ್ತು ನಿರ್ಮಾಪಕ–ನಿರ್ದೇಶಕರ ವಿರುದ್ಧ ದೂರು ದಾಖಲಿಸಬೇಕು ಎಂದು ಕೋರಿ ಮತ್ತೊಂದು ಅರ್ಜಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಆದರೆ, ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು ಎಂಬ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ತಿರಸ್ಕರಿಸಿದೆ.

ಮುಂದೂಡಿಕೆ ಇಲ್ಲ: ‘ಪದ್ಮಾವತಿ’ ಬಿಡುಗಡೆಯನ್ನು ಮುಂದಿನ ವರ್ಷ ಜನವರಿಗೆ ಮುಂದೂಡಲಾಗಿದೆ ಎಂಬ ವದಂತಿಗಳನ್ನು ನಿರ್ಮಾಪಕರು ಅಲ್ಲಗಳೆದಿದ್ದಾರೆ. ಜನವರಿ 12ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂಬುದು ಆಧಾರರಹಿತ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಹೇಳಿದೆ.

**

ಚಿತ್ತೋರ್‌ಗಡಕ್ಕೆ ಮುತ್ತಿಗೆ

ಪ‍ದ್ಮಿನಿ ಅರಮನೆ ಇರುವ ಚಿತ್ತೋರ್‌ಗಡಕ್ಕೆ (ಇದು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ) ಪ್ರವಾಸಿಗರ ಪ್ರವೇಶ ತಡೆಯುವ ಮೂಲಕ ಹಿಂದಿ ಸಿನಿಮಾ ‘ಪದ್ಮಾವತಿ’ಯ ವಿರುದ್ಧ ಹೊಸ ರೀತಿಯಲ್ಲಿ ಪ್ರತಿಭಟಿಸಲಾಗಿದೆ.

ಚಿತ್ತೋರ್‌ಗಡಕ್ಕೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಜಮಾಯಿಸಿದ ಸಮಾಜ ಸಮಿತಿ ಕಾರ್ಯಕರ್ತರು ಪ್ರವಾಸಿಗಳ ವಾಹನಗಳನ್ನು ತಡೆದರು. ರಜಪೂತ ಸಾಂಪ್ರದಾಯಿಕ ದಿರಿಸಿನಲ್ಲಿ ಕೈಯಲ್ಲಿ ಖಡ್ಗಗಳನ್ನು ಹಿಡಿದಿದ್ದ ಕಾರ್ಯಕರ್ತರು ರಸ್ತೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡರು.

ಚಿತ್ತೋರ್‌ಗಡಕ್ಕೆ ಪ್ರವಾಸಿಗರಿಗೆ ಒಂದು ದಿನ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲ ಎಂದು ಈಗಾಗಲೇ ಆಡಳಿತಕ್ಕೆ ತಿಳಿಸಲಾಗಿದೆ. 12 ದಿನಗಳಿಂದ ಪ್ರತಿಭಟನೆ ನಡೆಡಸುತ್ತಿದ್ದರೂ ನಮ್ಮ ಮನವಿಯನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಚಿತ್ತೋರ್‌ಗಡದಲ್ಲಿ ಮಾರ್ಚ್‌ನಲ್ಲಿ ನಾಲ್ಕೈದು ಜನರ ಗುಂಪೊಂದು ದಾಂದಲೆ ನಡೆಸಿತ್ತು. ಪದ್ಮಿನಿ ಅರಮನೆಯಲ್ಲಿ ಅಳವಡಿಸಲಾಗಿದ್ದ ಮೂರು ದೊಡ್ಡ ಕನ್ನಡಿಗಳನ್ನು ಅವರು ಒಡೆದು ಹಾಕಿದ್ದರು.

ಪ್ರಮಾಣಪತ್ರ: ಚಿತ್ರ ವಾಪಸ್‌

ಮುಂಬೈ: ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಕಳುಹಿಸಲಾಗಿದ್ದ ‘ಪದ್ಮಾವತಿ’ ಸಿನಿಮಾವನ್ನು ವಾಪಸ್‌ ಕಳುಹಿಸಲಾಗಿದೆ. ಸಿನಿಮಾಕ್ಕೆ ಪ್ರಮಾಣಪತ್ರ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಅಪೂರ್ಣವಾಗಿರುವುದೇ ಸಿನಿಮಾವನ್ನು ಹಿಂದಕ್ಕೆ ಕಳುಹಿಸಲು ಕಾರಣ ಎಂದು ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.