ADVERTISEMENT

ಪರಮಾಣು ವಿದ್ಯುತ್‌ ಉತ್ಪಾದನೆಗೆ 10 ರಿಯಾಕ್ಟರ್‌ ನಿರ್ಮಾಣಕ್ಕೆ ಸಂಪುಟ ಅಸ್ತು

ಪಿಟಿಐ
Published 17 ಮೇ 2017, 17:45 IST
Last Updated 17 ಮೇ 2017, 17:45 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶೀಯವಾಗಿ ಪರಮಾಣು ವಿದ್ಯುತ್‌ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟ ಸ್ಥಳೀಯವಾಗಿ 10 ಪರಮಾಣು ರಿಯಾಕ್ಟರ್‌ಗಳ ಸ್ಥಾಪನೆಗೆ ಬುಧವಾರ ಒಪ್ಪಿಗೆ ನೀಡಿದೆ. 

ಪರಮಾಣು ರಿಯಾಕ್ಟರ್‌ಗಳ ಸ್ಥಾಪನೆಗೆ ಇದ್ದ ಅಡೆತಡೆಗಳನ್ನು ತೆರವುಗೊಳಿಸಿರುವ ಕೇಂದ್ರ ಸರ್ಕಾರ ಹೊಸ 10 ಸ್ಥಾವರ ನಿರ್ಮಾಣಕ್ಕೆ ಒಂದೇ ಬಾರಿಗೆ ಅನುಮೋದನೆ ನೀಡಿದೆ. 10 ರಿಯಾಕ್ಟರ್‌ಗಳು ತಲಾ 700 ಮೆಗಾ ವಾಟ್‌ ವಿದ್ಯುತ್ ಉತ್ಪಾದನೆ ಮಾಡಲಿವೆ.

ಪರಮಾಣು ಇಂಧನ ಇಲಾಖೆಯಿಂದ ಪಿಎಚ್‌ಡಬ್ಲ್ಯುಆರ್‌ಗಳು ಸ್ಥಾಪನೆಯಾಗುತ್ತಿದ್ದು, ಒಟ್ಟು 7,000 ಮೆಗಾ ವಾಟ್‌ ವಿದ್ಯುತ್‌ ಉತ್ಪಾನೆ ಸೇರ್ಪಡೆಗೊಳ್ಳಲಿದೆ. ಇದು ಶುದ್ಧ ಶಕ್ತಿಯ ಉತ್ಪಾದನೆಗೆ ನೆರವಾಗಲಿದೆ ಎಂದು ಕೇಂದ್ರ ಇಂಧನ ಪಿಯೂಷ್ ಗೋಯಲ್‌ ಹೇಳಿದ್ದಾರೆ.

ADVERTISEMENT

ಭಾರತವು ಪ್ರಸ್ತುತ 6,780 ಮೆ.ವಾ. ಪರಮಾಣು ವಿದ್ಯುತ್ ಉತ್ಪಾದನೆ ಸಾಮರ್ಥ್ಯದ 22 ಘಟಕಗಳನ್ನು ಸ್ಥಾಪಿಸಿದೆ. ಹೊಸದಾಗಿ 6,700 ಮೆಗಾವಾಟ್ ಅಣು ವಿದ್ಯುತ್ ಉತ್ಪಾದನೆ 2021-22ರೊಳಗೆ ಸೇರ್ಪಡೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಸ್ತುತ ನಿರ್ಮಾಣ ಹಂತದ ಯೋಜನೆಗಳು ರಾಜಸ್ಥಾನ, ಗುಜರಾತ್ ಮತ್ತು ತಮಿಳುನಾಡಿನಲ್ಲಿವೆ. ಹೊಸ 10 ರಿಯಾಕ್ಟರ್‌ಗಳನ್ನು ರಾಜಸ್ತಾನದ ಮಣಿ ಬನ್ಸ್ವಾರಾ, ಮಧ್ಯ ಪ್ರದೇಶದ ಚಟ್ಕ, ಕರ್ನಾಟಕದ ಕೈಗಾ ಮತ್ತು ಹರಿಯಾಣದ ಗೋರಖ್‌ಪುರದಲ್ಲಿ ನಿರ್ಮಿಸಲಾಗುವುದು.

ಈ ಯೋಜನೆಯು ಭಾರತೀಯ ಪರಮಾಣು ಉದ್ಯಮವನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ ಹಾಗೂ ನೇರ ಮತ್ತು ಪರೋಕ್ಷವಾಗಿ 33,400 ಕ್ಕಿಂತ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.