ADVERTISEMENT

ಪವಿತ್ರ ಗ್ರಂಥಗಳ ಹೆಸರು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 20:07 IST
Last Updated 25 ನವೆಂಬರ್ 2015, 20:07 IST

ನವದೆಹಲಿ (ಪಿಟಿಐ): ವಾಣಿಜ್ಯ ಉದ್ದೇಶಗಳಿಗೆ ಯಾವುದೇ ಪವಿತ್ರ ಗ್ರಂಥಗಳ ಹೆಸರನ್ನು ‘ಟ್ರೇಡ್‌ಮಾರ್ಕ್‌’ ಆಗಿ ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಬುಧವಾರ ಹೇಳಿದೆ. ‘ಕುರಾನ್‌, ಬೈಬಲ್‌, ಗುರು ಗ್ರಂಥ ಸಾಹಿಬ್‌, ರಾಮಾಯಣ ಒಳಗೊಂಡಂತೆ ಹಲವಾರು ಪವಿತ್ರ ಮತ್ತು ಧಾರ್ಮಿಕ ಗ್ರಂಥಗಳಿವೆ.

ಯಾವುದೇ ವ್ಯಕ್ತಿ ಈ ಗ್ರಂಥಗಳ ಹೆಸರನ್ನು ತನ್ನ ಉತ್ಪನ್ನಗಳ ಪ್ರಚಾರ ಅಥವಾ ಮಾರಾಟಕ್ಕೆ ಟ್ರೇಡ್‌ಮಾರ್ಕ್‌ ರೂಪದಲ್ಲಿ ಬಳಸಬಾರದು’ ಎಂದು ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಮತ್ತು ಆರ್‌.ಕೆ. ಅಗರ್‌ವಾಲ್‌ ಅವರಿದ್ದ ಪೀಠ ತಿಳಿಸಿದೆ. ಬಿಹಾರ ಮೂಲದ ಲಾಲ್‌ ಬಾಬು ಪ್ರಿಯದರ್ಶಿ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿದೆ.

‘ದೇವರ ಅಥವಾ ಧರ್ಮಗ್ರಂಥಗಳ ಹೆಸರನ್ನು ಇಡಲು ಅನುಮತಿ ನೀಡುವುದು ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ. ಲಾಲ್‌ ಬಾಬು ಅವರು ‘ರಾಮಾಯಣ’ ಎಂಬ ಹೆಸರಿನಲ್ಲಿ ಅಗರಬತ್ತಿ ಮತ್ತು ಸುಗಂಧದ್ರವ್ಯವನ್ನು ಮಾರಾಟ ಮಾಡಲು ಮುಂದಾಗಿದ್ದರು.

ಆದರೆ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ) ಇದಕ್ಕೆ ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ‘ರಾಮಾಯಣ ಎಂಬುದು ಮಹರ್ಷಿ ವಾಲ್ಮೀಕಿ ಬರೆದ ಗ್ರಂಥದ ಹೆಸರು.  ಹಿಂದೂಗಳು ಇದನ್ನು ಪವಿತ್ರ ಗ್ರಂಥವಾಗಿ ಪರಿಗಣಿಸುವರು.

ಆದ್ದರಿಂದ  ವ್ಯಾಪಾರ ಮತ್ತು ಸರಕು ವಸ್ತುಗಳ ಮುದ್ರೆ ಕಾಯ್ದೆಯ ಪ್ರಕಾರ ಈ ಹೆಸರಿನಲ್ಲಿ ಒಂದು ಉತ್ಪನ್ನದ ಮಾರಾಟಕ್ಕೆ  ಅವಕಾಶ ಇಲ್ಲ’ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಅಗರಬತ್ತಿ ಪ್ಯಾಕೆಟ್‌ಗಳ ಮೇಲೆ ರಾಮ, ಸೀತೆ ಮತ್ತು ಲಕ್ಷ್ಮಣ ಅವರ ಚಿತ್ರಗಳನ್ನು ಬಳಸಿದ್ದನ್ನು ಕೂಡಾ ಸುಪ್ರೀಂಕೋರ್ಟ್‌ ಆಕ್ಷೇಪಿಸಿದೆ. ‘ದೇವಿ, ದೇವತೆಗಳ ಹೆಸರು ಬಳಸಿ ಲಾಭ ಪಡೆಯಲು ಯಾರಿಗೂ ಅನುಮತಿಯಿಲ್ಲ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.