ADVERTISEMENT

ಪಶ್ಚಿಮ ಬಂಗಾಳ ಇನ್ನು ‘ಬಂಗಾಳ’

ವಿಧಾನಸಭೆಯಲ್ಲಿ ನಿರ್ಣಯ: ಪ್ರತಿಪಕ್ಷಗಳ ವಿರೋಧ

ಪಿಟಿಐ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ   

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳವನ್ನು ಬಂಗಾಳಿಯಲ್ಲಿ ‘ಬಂಗ್ಲಾ’ ಎಂದು, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ‘ಬಂಗಾಲ್‌’ (Bengal) ಎಂದು ಬದಲಾಯಿಸಲು ಪಶ್ಚಿಮ ಬಂಗಾಳದ ವಿಧಾನಸಭೆ ಸೋಮವಾರ ನಿರ್ಣಯ ಅಂಗೀಕರಿಸಿದೆ. ಆದರೆ ಇದಕ್ಕೆ ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಎಡರಂಗಗಳು ವಿರೋಧ ವ್ಯಕ್ತಪಡಿಸಿವೆ.

ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ ಅವರು ನಿರ್ಣಯ ಮಂಡಿಸಿದರು.  ಪಶ್ಚಿಮ ಬಂಗಾಳದಲ್ಲಿ ‘ಪಶ್ಚಿಮ’ ಎಂಬ ಪದವನ್ನು ಬಿಟ್ಟರೆ ಆಡಳಿತಾತ್ಮಕವಾಗಿ ಹಲವು ಉಪಯೋಗಗಳಿವೆ ಎಂಬ ಕಾರಣಕ್ಕೆ ಹೆಸರು ಬದಲಿಸಲು ಸರ್ಕಾರ ತೀರ್ಮಾನಿಸಿದೆ.

‘ಬಂಗ್ಲಾ’ ಹೆಸರು ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಹೊಂದಿದೆ. ‘ಬಂಗೊ’ ಎಂಬ ಹೆಸರು ಇಡುವುದಕ್ಕೂ ನನ್ನ ಅಭ್ಯಂತರವಿಲ್ಲ. ಆದರೆ ಸಾಕಷ್ಟು ಜನ  ಬಂಗಾಳಿಯಲ್ಲಿ ‘ಬಂಗ್ಲಾ’ ಎಂದು ಆಂಗ್ಲ ಭಾಷೆಯಲ್ಲಿ ‘ಬೆಂಗಾಲ್‌’ ಎಂದೂ ಹಿಂದಿಯಲ್ಲಿ ‘ಬಂಗಾಲ್‌’ ಎಂಬ ಹೆಸರು ಇಡಲು ಬಯಸಿದ್ದಾರೆ.

ಆಂಗ್ಲ ಭಾಷೆಯಲ್ಲಿ ‘Bengal’ ಎಂದು ಇರುವ ಕಾರಣ ನೆರೆಯ ‘ಬಾಂಗ್ಲಾದೇಶ’ದ ಹೆಸರು ಎಂಬ ಗೊಂದಲ ಉಂಟಾಗದು’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.

‘ಭಾರತದಿಂದ ಹೊರಗೆ ಅಥವಾ ನೆರೆ ರಾಜ್ಯಗಳಿಗೆ ಹೋದಾಗ  ನಾವು ಬಂಗಾಳದಿಂದ ಬಂದವರು ಎಂದು ಜನ ಗುರುತಿಸುತ್ತಾರೆ. 2011 ರಲ್ಲೇ ರಾಜ್ಯದ ಹೆಸರು ಬದಲಿಸಲು ಪ್ರಸ್ತಾವವಿತ್ತು. ಆದರೆ ಇದನ್ನು ಕೇಂದ್ರ ತಡೆಹಿಡಿದಿತ್ತು. ಆನಂತರ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದ್ದರಿಂದ ಈಗ ಬದಲಿಸಲು ಮುಂದಾದೆವು’ ಎಂದು ವಿವರಿಸಿದರು.

‘ರಾಜ್ಯದ ಹೆಸರು ಬದಲಿಸಲು ಕೇಂದ್ರ ಸರ್ಕಾರ ನೆರವಾಗಬೇಕು. ಸಂಸತ್ತಿನಲ್ಲಿ ಮಂಡಿಸಬೇಕು. ಇದನ್ನು ಆದಷ್ಟು ಬೇಗ  ಮಾಡಬೇಕು’ ಎಂದರು.

***
ರಾಜಕೀಯ ಕಾರಣಗಳಿಂದ ಕೆಲವರು ರಾಜ್ಯದ ಹೆಸರು ಬದಲಾವಣೆಗೆ ವಿರೋಧಿಸುತ್ತಿದ್ದಾರೆ. ಇದು  ತಪ್ಪು. ಇತಿಹಾಸ ಅವರನ್ನು  ಕ್ಷಮಿಸುವುದಿಲ್ಲ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.